ಸಂವಿಧಾನವನ್ನು ‘ಟೂಲ್’ ಆಗಿ ಬಳಸಲು ಬಿಡೆವು: ಬಿ.ಎಲ್ ಸಂತೋಷ್
ಮಂಗಳೂರು: ಡಾ. ಅಂಬೇಡ್ಕರ್ ಅವರ ಹೆಸರನ್ನು ಟೂಲ್ ರೀತಿ ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ಟೂಲ್ ತರ ಉಪಯೋಗಿಸಲು ಅವರಿಗೆ ಸಾಧ್ಯವಿಲ್ಲ. ನಾವು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಮಂಗಳೂರು ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇಂದು ನಡೆದ ಸಂವಿಧಾನ ಸನ್ಮಾನ ಮತ್ತು ವಿಕಾಸ್ ಕುಮಾರ್ ಪಿ. ಬರೆದಿರುವ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಕೃತಿಯನ್ನು ಅವರು ಲೋಕಾರ್ಪಣೆ ಮಾಡಿದರು.
ಸಂವಿಧಾನವನ್ನು ಖರೀದಿ ಮಾಡಿ ಬ್ರಾಂಡ್ ಮಾಡಿಟ್ಟುಕೊಂಡವರು ಅದನ್ನ ಕೇವಲ ಭಾಷಣಕ್ಕಾಗಿ ಮಾತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಅಂಬೇಡ್ಕರ್, ಸಂವಿಧಾನವನ್ನು ತಾವೇ ಗುತ್ತಿಗೆ ತಗೊಂಡಿದ್ದೇವೆ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಎಲ್ಲರಿಗೂ ಸೇರಿದವರಾಗಿದ್ದಾರೆ ಎಂದರು.
ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್ನಿಂದ ಯಾಕೆ ಹೊರಬಂದರು ಎಂಬುದು ಗೊತ್ತೇ ಇದೆ. ಕಾಂಗ್ರೆಸ್ನ ವೋಟ್ಬ್ಯಾಂಕ್ ಹಪಾಹಪಿಗೆ ಬೇಸತ್ತು ಹೊರಬಂದರು. ಸಂವಿಧಾನದಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳ ಸೇರ್ಪಡೆಗೆ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ ಅಂಬೇಡ್ಕರ್ ವಿರೋಧದ ನಡುವೆಯೂ ಜಾತ್ಯಾತೀತ, ಸಮಾಜವಾದ ಸೇರಿಸಿದ ಕಾಂಗ್ರೆಸ್ನವರು ಇಂದು ಕೇವಲ ಚುನಾವಣೆಗಾಗಿ ಮಾತ್ರ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಇಂದು ಎಲ್ಲದಕ್ಕೂ ಅಂಬೇಡ್ಕರ್ ಜಪ ಮಾಡುವ ಕಾಂಗ್ರೆಸ್ನವರು ಹಿಂದೆ ಅಂಬೇಡ್ಕರ್ಗೆ ಅವಮಾನ ಮಾಡಿದರು, ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದರು. ಬದುಕಿದ್ದಾಗ ಬಿಡಿ ಅಂಬೇಡ್ಕರ್ ತೀರಿಕೊಂಡ ಮೇಲೆಯೂ ಅವರ ಪಾರ್ಥೀವ ಶರೀರವನ್ನು ದೆಹಲಿಯಲ್ಲಿ ಅಂತಿಮ ಸಂಸ್ಕಾರ ಮಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ, ಕಾಂಗ್ರೆಸ್ ಕಾಲದಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಮಾಡೋದಕ್ಕೂ ಸಹ ಸಾಧ್ಯವಾಗಲಿಲ್ಲ. ಅಂಬೇಡ್ಕರಗೆ ಅವಮಾನ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್ಗೆ ಇಂದು ಅಂಬೇಡ್ಕರ್ ಹೆಸರು ಹೇಳಲು ಯಾವ ನೈತಿಕತೆ ಇದೆ? ಎಂದು ಹರಿಹಾಯ್ದರು.
ಮಾತು ಮಾತಿಗೆ ಅಂಬೇಡ್ಕರ್ ಎನ್ನುವ ಕಾಂಗ್ರೆಸ್ವರಿಗೆ ಅಂಬೇಡ್ಕರ್ಗೆ ಭಾರತ ರತ್ನ ಕೊಡಬೇಕು ಎನ್ನಿಸಲಿಲ್ಲ. ಬದುಕಿದ್ದಾಗ ಅಂಬೇಡ್ಕರ್ ಅವರಿಗೆ ಕನಿಷ್ಟ ಗೌರವ ಕೊಡದ ಕಾಂಗ್ರೆಸ್ ಇವತ್ತು 170 ರೂಪಾಯಿ ಕೊಟ್ಟು ಖರೀದಿಸಿದ ಸಂವಿಧಾನದ ಪುಸ್ತಕ ಇಟ್ಟುಕೊಂಡು ಒಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕಾಂಗ್ರೆಸ್ ನಡುವೆ ನಡೆವಳಿಕೆಯಲ್ಲಿ ಬಹಳ ವ್ಯತ್ಯಾಸವಿದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಂವಿಧಾನ ಬದಲು ಮಾಡ್ತಾರೆ ಅಂತಾ ಹೇಳಿದರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬದಲಾಯ್ತಾ? ನಿಜವಾಗಿಯೂ ಸಂವಿಧಾನಕ್ಕೆ ಗೌರವ ಕೊಟ್ಟವರು ಬಿಜೆಪಿಯವರು. 370ನೇ ವಿಧಿಯನ್ನು ಅಂಬೇಡ್ಕರ್ ಅವರ ವಿರೋಧದ ನಡುವೆಯೂ ನೆಹರು ಸೇರಿಸಿದ್ರು. ಆದರೆ ಈ ವಿಧಿಯನ್ನು ಕಿತ್ತೆಸೆಯುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ನಮ್ಮ ನಡೆವಳಿಕೆ ಏನು, ಕಾಂಗ್ರೆಸ್ ನಡೆವಳಿಕೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಸಂವಿಧಾನದ ಸ್ವರೂಪವನ್ನೇ ಬದಲಿಸಿದ್ದು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ. ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಇದನ್ನು ಅರ್ಥಮಾಡಿಸೋಕೆ ಆಗುವುದಿಲ್ಲ. ಒಂದಷ್ಟು ವಯಸ್ಸು ಆದ ಬಳಿಕ ಏನೇ ಹೇಳಿದರೂ ಅರ್ಥ ಆಗುವುದಿಲ್ಲ. ದೇಶ ಕಂಡಂತಹ ಡಿಕ್ಟೇಟರ್ ಚೀಫ್ ಇಂದಿರಾ ಗಾಂಧಿ. ಎಮರ್ಜೆನ್ಸಿ ಟೈಮ್ನಲ್ಲಿ ಸಿದ್ದರಾಮಯ್ಯನವರು ಇಂದಿರಾಗಾಂಧಿಗೆ ಬಾಯಿಗೆ ಬಂದಹಾಗೆ ಬೈದಿದ್ರು. ಆದರೆ ಅದೇ ಸಿದ್ದರಾಮಯ್ಯ ಇವತ್ತು ಇಂದಿರಾ ಗಾಂಧಿಗೆ ಜೈ ಎನ್ನುತ್ತಿದ್ದಾರೆ. ಅದೇ ಸಿದ್ದರಾಮಯ್ಯ ಇಂದು ಅವರದ್ದೇ ಫೋಟೊ ಹಾಕಿ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಮಾಡಿರುವ ಅನ್ಯಾಯಗಳು ಒಂದೆರಡಲ್ಲ ಅನೇಕ ಇವೆ. ತಮ್ಮ ಆಳ್ವಿಕೆಯ ಕಾಲದಲ್ಲಿ ಎಲ್ಲವನ್ನೂ ಧ್ವಂಸ ಮಾಡಿದವರು ಕಾಂಗ್ರೆಸ್ ನವರೇ ಎಂದು ಹರಿಹಾಯ್ದರು.
ಪುಸ್ತಕ ಪರಿಚಯ ಮಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ‘ಸಂವಿಧಾನ ಬದಲಾಯಿಸಿದ್ದು ಯಾರು? ’ ಕೃತಿ ಅಂಬೇಡ್ಕರ್ ಆಶಯವನ್ನು ಈಡೇರಿಸಿದ್ದು ಪ್ರಧಾನಿ ನರೇಂದ್ರ ಮೋದಿಯವೆರು. ಸಂವಿಧಾನಕ್ಕೆ ಇಲ್ಲಿಯ ತನಕ ಒಟ್ಟು 106 ಸಲ ತಿದ್ದುಪಡಿಯಾಗಿದೆ, ಇದರಲ್ಲಿ 75 ಸಲ ತಿದ್ದುಪಡಿ ತಂದಿರುವುದು ಕಾಂಗ್ರೆಸ್ ಸರಕಾರ, ಅದು ಜನರ ಹಿತಕ್ಕಲ್ಲ, ಅವರರ ಸ್ವಾರ್ಥಕ್ಕಾಗಿ. ಈ ಕೃತಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೃತಿ ಎಂದರು.
ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥ ಡಾ.ಹೃಷಿಕೇಷ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ವಿಕಾಸ್ ಕುಮಾರ್ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು.
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಚಾಲಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು.