ಕಾಂಗ್ರೆಸ್‌ನಿಂದ ಸಮಾಜದಲ್ಲಿ ಮಹಿಳೆಯರು ಗೌರವದಿಂದ ಬದುಕುವ ಸನ್ನಿವೇಶ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್

ಕಾಂಗ್ರೆಸ್‌ನಿಂದ ಸಮಾಜದಲ್ಲಿ ಮಹಿಳೆಯರು ಗೌರವದಿಂದ ಬದುಕುವ ಸನ್ನಿವೇಶ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್


ಬಂಟ್ವಾಳ: ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಮಹಿಳೆಯರು ಸಮಾಜದಲ್ಲಿ ಘನತೆ-ಗೌರವದಿಂದ ಬದುಕುವಂತಹ ಸನ್ನಿವೇಶ ನಿರ್ಮಿಸಿದರೆ, ಇತ್ತ ಬಿಜೆಪಿಗರು ಸದನದಲ್ಲೂ ಮಹಿಳೆಯರ ಮಾನ ಹರಣ ಮಾಡುವ ನೀಚ ಕೃತ್ಯದಲ್ಲಿ ತೊಡಗಿದ್ದು, ನಾಗರಿಕ ಸಮಾಜ ಇದನ್ನು ಸಹಿಸಲು ಅಸಾಧ್ಯವಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಹಾಗೂ ಶಾಸಕ ಸಿ.ಟಿ. ರವಿ ಅವರ ವಿರುದ್ಧ ಶನಿವಾರ ಬಿ.ಸಿ ರೋಡಿನ ಮೇಲ್ಸ್ ತುವೆಯ ತಳಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಮಹಿಳಾ ಸಚಿವೆಯ ಬಗ್ಗೆ ಅವಹೇಳನಕರ ಶಬ್ದ ಬಳಸಿದ ಶಾಸಕನ ವಿರುದ್ದ ಬಿಜೆಪಿ ನಾಯಕರು ಕ್ರಮ ಜರುಗಿಸುವ ಬದಲು ಅವರ ಕೃತ್ಯವನ್ನು ಸಮರ್ಥಿಸುವುದು ದುರಾದೃಷ್ಟಕರ ಎಂದರು.

ಜಾತಿ, ಧರ್ಮ, ಮಹಿಳೆ, ಸಂವಿಧಾನ ಎಲ್ಲವನ್ನೂ ಬಿಜೆಪಿಗರು ಬರೀ ರಾಜಕಾರಣ, ಮತಗಳಿಕೆಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಅವರಲ್ಲಿ ಮಾನವೀಯತೆ ಎಂಬುದು ಕಿಂಚಿತ್ತೂ ಉಳಿದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬಿಜೆಪಿಗರು ಮಹಿಳೆಯರು, ಸಂವಿಧಾನ, ರಾಷ್ಟ್ರಧ್ವಜ ಇದೆಲ್ಲದರ ವಿರುದ್ದ ವಿವಾದಾತ್ಮಕವಾಗಿ ಮಾತನಾಡುತ್ತಿರುವುದು ಇದೇನು ಮೊದಲೇನಲ್ಲ. ಅವರ ಹಿಡನ್ ಅಜೆಂಡಾ ಪ್ರಕಾರ ಮನಸ್ಸಿನಲ್ಲಿರುವುದನ್ನು ಕಾಲ ಕಾಲಕ್ಕೆ ಹೇಳುತ್ತಲೇ ಬರುತ್ತಿದ್ದಾರೆ. ಬಳಿಕ ಬಾಯಿ ತಪ್ಪು ಎಂದು ತೇಪೆ ಹಚ್ಚಲು ಪ್ರಯತ್ನಿಸುತ್ತಿದ್ದಾರಷ್ಟೆ. ಇವರ ಇಂತಹ ಕೃತ್ಯಗಳನ್ನು ಎಂದಿಗೂ ಸಹಿಸಲಸಾಧ್ಯ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಕ್ಷ ಪ್ರಮುಖರಾದ ಬೇಬಿ ಕುಂದರ್, ಬಿ. ವಾಸು ಪೂಜಾರಿ ಲೊರೆಟ್ಟೊ, ಬಿ. ಪದ್ಮಶೇಖರ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಐಡಾ ಸುರೇಶ್, ಮಲ್ಲಿಕಾ ಶೆಟ್ಟಿ, ವಿಲ್ಮಾ, ಜೆಸಿಂತಾ ಡಿಸೋಜಾ, ಜಿ.ಎಂ. ಇಬ್ರಾಹಿಂ ಮಂಚಿ, ಪದ್ಮನಾಭ ರೈ, ಕರೀಂ ಬೊಳ್ಳಾಯಿ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ ಬಂಟ್ವಾಳ, ಜಗನ್ನಾಥ ತುಂಬೆ, ಇಬ್ರಾಹಿಂ ಕೈಲಾರ್, ಚಿತ್ತರಂಜನ್ ಶೆಟ್ಡಿ ಬೊಂಡಾಲ ಮೊದಲಾದವರಿದ್ದರು. ಬಿ.ಎಂ. ಅಬ್ಬಾಸ್ ಅಲಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article