ಸಂವಿಧಾನವನ್ನು ರಾಜಕೀಯ ‘ಟೂಲ್’ ಆಗಿ ಬಳಸುತ್ತಿರುವ ಕಾಂಗ್ರೆಸ್: ಬಿ.ಎಲ್. ಸಂತೋಷ್ ಟೀಕೆ

ಸಂವಿಧಾನವನ್ನು ರಾಜಕೀಯ ‘ಟೂಲ್’ ಆಗಿ ಬಳಸುತ್ತಿರುವ ಕಾಂಗ್ರೆಸ್: ಬಿ.ಎಲ್. ಸಂತೋಷ್ ಟೀಕೆ


ಮಂಗಳೂರು: ಸಂವಿಧಾನವನ್ನು ಕಾಂಗ್ರೆಸ್ ರಾಜಕೀಯ ಟೂಲ್ ಆಗಿ ಬಳಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟೀಕಿಸಿದ್ದಾರೆ.

ನಗರದ ಪುರಭವನದಲ್ಲಿ ಇಂದು ವಿಕಾಸ್ ಕುಮಾರ್ ಪಿ. ಅವರ ‘ಸಂವಿಧಾನ ಬದಲಾಯಿಸಿದ್ದು ಯಾರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಅಪಮಾನ ಮಾಡಿದವರು, ಸತ್ತ ಬಳಿಕ ಗೌರವ ನೀಡಲಾಗದವರು ಈಗ ಅವರನ್ನು ಕೇವಲ ಒಂದು ಟೂಲ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಮಗುವಿಗೆ ತಾಯಿ ಒಂದು ‘ಟೂಲ್' ಆಗಬಾರದು, ಹಾಗೆಯೇ ಡಾ|ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ಯಾರಿಗೂ ಟೂಲ್ ಆಗಬಾರದು, ಅದನ್ನು ದೇವರು, ಕಾಲ ಮತ್ತು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ, ಇಂದಿನ ಸನ್ನಿವೇಶದಲ್ಲಿ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದೂ ಇಲ್ಲ ಎಂದರು.

1952ರಲ್ಲಿ ಅಂಬೇಡ್ಕರ್ ಅವರು ಮಹಾ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಆಗಿನ ಕಾಲದಲ್ಲೇ ನೆಹರೂ ಅವರು ಎರಡು ಬಾರಿ ಅವರ ಕ್ಷೇತ್ರಕ್ಕೆ ಆಗಮಿಸಿದ್ದರು. ಅಲ್ಲಿ ಅಂಬೇಡ್ಕರ್ ಸೋಲಬೇಕಾಯಿತು, ಭಂಡಾರಾದಲ್ಲಿ ನಡೆದ ಉಪಚುನಾವಣೆಯಲ್ಲಿ ಅಂಬೇಡ್ಕರ್ ಅವರು ಮೂರನೇ ಸ್ಥಾನಕ್ಕೆ ಇಳಿಯುವಂತೆ ಕಾಂಗ್ರೆಸ್ ನೋಡಿಕೊಂಡಿತು. ಅವರು 1957ರಲ್ಲಿ ದಿಲ್ಲಿಯ ಆಲಿಪುರದಲ್ಲಿ ನಿಧನರಾದಾಗ ಅಲ್ಲಿ ಅವರ ಅಂತ್ಯಸಂಸ್ಕಾರ ಕೂಡಾ ನಡೆಸಲು ಬಿಡಲಿಲ್ಲ, ಅವರ ಪತ್ನಿಯನ್ನು ಆರು ತಿಂಗಳೊಳಗೆ ಬಂಗಲೆ ಖಾಲಿ ಮಾಡಲು ಸೂಚಿಸಲಾಗಿತ್ತು.

ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೆಹರೂ ಹಾಗೂ ಇಂದಿರಾ ಗಾಂಧಿ ಎಂದೂ ಅಂಬೇಡ್ಕರ್ ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಲೇ ಇಲ್ಲ, ಕೊನೆಗೆ ಇತರ ಪಕ್ಷಗಳ ಒತ್ತಾಯದಿಂದ ತಡವಾಗಿ 1990ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗಲಷ್ಟೇ ಅವರಿಗೆ ಅದು ಸಿಕ್ಕಿತು. ಒಂದು ಪರಿವಾರದವರಿಗೆ ಬಿಟ್ಟರೆ ಉಳಿದ ಗಣ್ಯರಿಗೆ ಮರಣೋತ್ತರ ಸ್ಮಾರಕದ ಗೌರವವನ್ನೂ ದಿಲ್ಲಿಯಲ್ಲಿ ನಿರಾಕರಿಸಲಾಗಿತ್ತು. ಅವರದೇ ಪಕ್ಷದ ಮುಖಂಡ ಸೀತಾರಾಮ ಕೇಸರಿ ಹಾಗೂ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರಿಗೂ ಇದೇ ಸ್ಥಿತಿಯಾಗಿದೆ. ಈಗ ಅಂಬೇಡ್ಕರ್ ಅವರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿಯವರು ಅಂಬೇಡ್ಕರ್ ಅವರ ನೆನಪನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಅವರ ಜನ್ಮಸ್ಥಳ, ಶಿಕ್ಷಣದ ಸ್ಥಳ, ದೀಕ್ಷಾ ಸ್ಥಳ, ಪರಿನಿರ್ವಾಣದ ಜಾಗ ಮತ್ತು ಅಂತಿಮಸಂಸ್ಕಾರ ನಡೆದ ಜಾಗಗಳನ್ನು ಪಂಚತೀರ್ಥವನ್ನಾಗಿ ಘೋಷಿಸಿ ಅಭಿವೃದ್ಧಿ ಮಾಡಿ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article