ಮಹಿಳೆ ಬಗ್ಗೆ ಕೀಳು ಮಾತು ದುರದೃಷ್ಟಕರ, ಬಿಜೆಪಿ-ಸಂಘಪರಿವಾರ ಯಾಕೆ ಮೌನ: ಸಚಿವ ಗುಂಡೂರಾವ್ ಪ್ರಶ್ನೆ
ಪುತ್ತೂರು: ಮಹಿಳೆಯರನ್ನು ಮಾತೆ ಎಂದು ಕರೆಯುವ ಬಿಜೆಪಿ ಮತ್ತು ಸಂಘಪರಿವಾರ ಓರ್ವ ಮಹಿಳೆಯ ಬಗ್ಗೆ ಅತ್ಯಂತ ಕೆಟ್ಟ ಶಬ್ದ ಬಳಕೆ ಮಾಡಿರುವ ಸಿ.ಟಿ.ರವಿ ಅವರ ನಡವಳಿಕೆ ಬಗ್ಗೆ ಯಾಕೆ ಸುಮ್ಮನಿದೆ.. ಕನಿಷ್ಟ ಅವರ ನಡವಳಿಕೆಯನ್ನು ಖಂಡಿಸುವ ಕೆಲಸವನ್ನೂ ಮಾಡಿಲ್ಲ. ಮಹಿಳೆಯ ಮೇಲೆ ಕೀಳುಮಟ್ಟದ ಶಬ್ದ ಬಳಕೆ ಮಾಡಿದ ಅವರ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಂಡಿಲ್ಲ. ಅವರ ಈ ನಡವಳಿಕೆ ಬಿಜೆಪಿ-ಸಂಘಪರಿವಾರಕ್ಕೆ ಸಮ್ಮತವೇ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಶನಿವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾತೆತ್ತಿದರೆ ಭಾರತ್ ಮಾತಾಕೀ ಜೈ ಎನ್ನುವವರು, ಮಹಿಳೆ ಎಂದರೆ ದೇವತೆ ಎನ್ನುವವರು ಒಬ್ಬ ಮಹಿಳೆ ಬಗ್ಗೆ ಹೀಗೆ ಮಾತನಾಡಬಹುದಾ? ಹೀಗಿದ್ದರೂ ಸಂಘ ಪರಿವಾರ, ಬಿಜೆಪಿ ಯಾಕೆ ಸುಮ್ಮನಿದೆ.
ಸಿ.ಟಿ. ರವಿಯವರನ್ನು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ. ಯಾರೂ ಅಲ್ಲಿ ಕಟ್ಟು ಕಥೆ ಕಟ್ಟಿಲ್ಲ. ಸದನದಲ್ಲಿ ನಡೆದ ಘಟನೆ ಅದು. ಅದಕ್ಕೆ ಹತ್ತಾರು ಶಾಸಕರು ಸಾಕ್ಷಿಯಾಗಿದ್ದಾರೆ. ಮಹಿಳೆ ಬಗ್ಗೆ ಈ ಥರ ಮಾತನಾಡಿದ್ದನ್ನು ಹೇಗೆ ಸಹಿಸಬಹುದು? ಕಾನೂನು ಪ್ರಕಾರ ಕೂಡ ಆ ಥರ ಹೇಳುವ ಹಾಗಿಲ್ಲ. ಹಾಗಾಗಿ ಕಾನೂನು ಕ್ರಮಗಳಾಗುತ್ತವೆ. ಹಕ್ಕುಚ್ಯುತಿ ಸಮಿತಿಗೂ ಸ್ಪೀಕರ್ ಶಿಫಾರಸು ಮಾಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಬಂಧಿಸಿದ್ದಾರೆ. ಕಾನೂನಿನಡಿಯಲ್ಲೇ ಜಾಮೀನು ಸಿಕ್ಕಿದೆ. ಅದೆಲ್ಲ ಒಂದು ಪ್ರಕ್ರಿಯೆ. ಅದರಲ್ಲಿ ಸರ್ಕಾರಕ್ಕೆ ಮುಖಭಂಗ ಆಗುವಂಥದ್ದೇನಿಲ್ಲ. ಬಿಜೆಪಿ ಕಡೆಯಿಂದ ರವಿ ಮಾತಿನ ಬಗ್ಗೆ ಒಂದು ಕನಿಷ್ಠ ಖಂಡನೆಯಾದರೂ ಇಲ್ಲ. ಹಾಗಾದರೆ ಮಹಿಳೆ ಬಗ್ಗೆ ಈ ರೀತಿ ಹೇಳಬಹುದಾ ಎಂದು ಬಿಜೆಪಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ನಾವು ಅವರನ್ನು ಕೊಲ್ಲಲು ಯತ್ನಿಸಿದ್ದೇವೆ ಎಂದು ರವಿ ಆಪಾದಿಸಿದ್ದಾರೆ. ನಾವೇಕೆ ಅವರನ್ನು ಕೊಲ್ಲಬೇಕು. ಅವರನ್ನು ಕೊಂದರೆ ನಮಗೇನು ಸಿಗುತ್ತದೆ. ಆ ಥರ ನೀಚ ಕೆಲಸ ನಾವೇಕೆ ಮಾಡ್ತೀವಿ. ಬಿಜೆಪಿಯವರು ಜನರ ದಾರಿ ತಪ್ಪಿಸಲು ಸುಮ್ಮನೆ ಡ್ರಾಮಾ ಮಾಡ್ತಿದ್ದಾರೆ. ನಿಜವಾದ ವಿಷಯ ಯಾವುದೆಂದರೆ ಸಿ.ಟಿ. ರವಿ ಒಬ್ಬರು ಮಹಿಳೆ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಇದು ಸರಿಯಾ ಎಂದು ಪ್ರಶ್ನಿಸಬೇಕಾಗಿದೆ. ಯಾಕೆ ಸಂಘ ಪರಿವಾರ ನಾಯಕರು ಈ ಬಗ್ಗೆ ಮೌನವಾಗಿದ್ದಾರೆ ಎಂಬುದಕ್ಕೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು.