
ಕುಕ್ಕೆ: ಶ್ರೀ ದೇವರಿಗೆ ನೂತನ ಬೆಳ್ಳಿಪಲ್ಲಕಿ ಸಮರ್ಪಣೆ: ಪಾಲಕಿ ಉತ್ಸವ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ ಕುಟುಂಬಸ್ಥರು ಸೇವಾರೂಪದಲ್ಲಿ ಶ್ರೀ ದೇವಳಕ್ಕೆ ನೀಡಿದ ನೂತನ ಬೆಳ್ಳಿಪಲ್ಲಕಿಯನ್ನು ಸೋಮವಾರ ಶ್ರೀ ದೇವರಿಗೆ ಸಮರ್ಪಿಸಲಾಯಿತು.
ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ಉಪಸ್ಥಿತಿಯಲ್ಲಿ ದೇವಳದ ಅರ್ಚಕ ವೇ.ಮೂ. ಸತ್ಯನಾರಾಯಣ ನೂರಿತ್ತಾಯರು ವೈದಿಕ ವಿದಿ ವಿಧಾನ ನೆರವೇರಿಸಿದರು.
ಶುದ್ಧಿ ಕಲಶ:
ಸೋಮವಾರ ಸಂಜೆ ಶ್ರೀ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ನೂತನ ಪಲ್ಲಕಿಗೆ ಶುದ್ಧಿ ಕಲಶ ನೆರವೇರಿಸಿದರು.ಅಲ್ಲದೆ ಕಲಶಾಭಿಷೇಕ ಮಾಡಿದರು.ನಂತರ ಪಲ್ಲಕಿಯನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.ಬಳಿಕ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ, ಡಾ.ಚಿನ್ಮಯಿ ಕೊಚ್ಚಿ ಮತ್ತು ಕುಟುಂಬಸ್ಥರು ಪಾಲಕಿ ಉತ್ಸವಕ್ಕೆ ಸಂಕಲ್ಪ ನೆರವೇರಿಸಿದರು.
ನೂತನ ಪಲ್ಲಕಿಯಲ್ಲಿ ಉತ್ಸವ:
ರಾತ್ರಿ ಶ್ರೀ ದೇವರ ಮಹಾಪೂಜೆಯ ಬಳಿಕ ನೂತನ ಬೆಳ್ಳಿ ಪಲ್ಲಕಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವವು ನೆರವೇರಿತು.ಅಲ್ಲದೆ ವಿವಿಧ ಸಂಗೀತ ಸುತ್ತು ಮತ್ತು ದೇವತಾ ಸ್ತುತಿಯ ಸುತ್ತಿನ ಮೂಲಕ ಪಾಲಕಿ ಉತ್ಸವವನ್ನು ನೂತನ ಪಲ್ಲಕಿಯಲ್ಲಿ ಶ್ರೀ ದೇವರು ಸ್ವೀಕರಿಸಿದರು. ಈ ಸಂದರ್ಭ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವವು ಹೊರಾಂಗಣದಲ್ಲಿ ನಡೆಯಿತು. ದೇವಳದ ಅರ್ಚಕ ವೇದಮೂರ್ತಿ ರಾಮಕೃಷ್ಣ ನೂರಿತ್ತಾಯರು ಉತ್ಸವದ ವಿದಿವಿಧಾನ ನೆರವೇರಿಸಿದರು.
ಆಶೀರ್ವಾದದ ಗೌರವ:
ಸುಮಾರು 17 ಲಕ್ಷದ 65 ಸಾವಿರದ 200 ರೂ. ವೆಚ್ಚದಲ್ಲಿ 18 ಕೆ.ಜಿ ಬೆಳ್ಳಿಯಲ್ಲಿ ನಿರ್ಮಿಸಿದ ನೂತನ ಪಲ್ಲಕಿಯ ಸಮರ್ಪಣಾ ಸೇವೆ ನೆರವೇರಿಸಿದ ಸೇವಾರ್ಥಿಗಳಾದ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಅವರಿಗೆ ಅರ್ಚಕ ರಾಮಕೃಷ್ಣ ನೂರಿತ್ತಾಯರು ಶಾಲು ಹೊದಿಸಿ ಶ್ರೀ ದೇವರ ಬೆಳ್ಳಿಯ ಪೋಟೋ ಮತ್ತು ಮಹಾಪ್ರಸಾದ ನೀಡಿ ಹರಸಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಸೇವಾರ್ಥಿಗಳ ಕುಟುಂಬಸ್ಥರಾದ ಡಾ. ಚಿನ್ಮಯಿ ಕೊಚ್ಚಿ, ಶ್ರೀನಿಧಿ, ಯಧುನಂದನ ಗಲಗಲಿ, ಸುಮಂತ್, ರಾಘವ್, ಸುದನ್ವ ಉಪಸ್ಥಿತರಿದ್ದರು. ಈ ದಿನ ಸೇವಾರ್ಥಿಗಳ ಕುಟುಂಬಸ್ಥರು ಶ್ರೀ ದೇವರಿಗೆ ಪಂಚಾಮೃತ ಮಹಾಭಿಷೇಕ ಮತ್ತು ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸೇವೆ ನೆರವೇರಿಸಿದರು.