
ಕಾಡಾನೆ ದಾಳಿಗೆ ಅಯ್ಯಪ್ಪ ವ್ರತಧಾರಿ ಗಂಭೀರ
ಸುಳ್ಯ: ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಯ್ಯಪ್ಪ ವ್ರತಧಾರಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅಯ್ಯಪ್ಪ ವ್ರತಧಾರಿ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕಲ್ಮಕಾರಿನ ರಾಘವ ಎಂಬವರ ಪುತ್ರ ಚರಿತ್(28) ಆನೆ ದಾಳಿಯಿಂದ ಗಾಯಗೊಂಡವರು.
ಚರಿತ್ ಅವರು ಅಯ್ಯಪ್ಪ ವ್ರತಧಾರಿಯಾಗಿದ್ದು, ಮಂಗಳವಾರ ಬೆಳಗ್ಗೆ ಗಂಟೆ 6.30ರ ವೇಳೆಗೆ ಕಲ್ಮಕಾರಿನ ಶೆಟ್ಟಿಕಟ್ಟ ಎಂಬಲ್ಲಿನ ಮಂದಿರದ ಸಮೀಪದ ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾಡಾನೆ ಚರಿತ್ ಅವರ ಮೇಲೆ ದಾಳಿ ನಡೆಸಿದೆ. ಚರಿತ್ ಅವರನ್ನು ಆನೆ ಸೊಂಡಿಲಿನಿಂದ ಎತ್ತಿ ನೀರಿಗೆ ಎಸೆದು, ಬಳಿ ಅಲ್ಲಿನ ನಿರ್ಮಾಣ ಹಂತದ ಸೇತುವೆ ಪಿಲ್ಲರ್ ಬಳಿಗೆ ಎಸೆದಿದೆ ಎನ್ನಲಾಗಿದೆ. ಘಟನೆಯಿಂದ ಚರಿತ್ ಅವರ ಬೆನ್ನು ಹಾಗೂ ತಲೆಗೆ ತೀವ್ರ ಗಾಯವಾಗಿದೆ.
ಅಲ್ಲೇ ಸಮೀಪದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯೋರ್ವರು ಘಟನೆಯನ್ನು ಕಂಡು ಸಮೀಪದಲ್ಲಿದ್ದವರಿಗೆ ಮಾಹಿತಿ ನೀಡಿದ್ದು, ಅವರು ಅಲ್ಲಿಗೆ ಆಗಮಿಸಿ ಗಾಯಗೊಂಡಿದ್ದ ಚರಿತ್ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ. ಚರಿತ್ ಅವರು ಹರಿಹರದಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದರು.
ಮಂಗಳೂರು ಆಸ್ಪತ್ರೆಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಮತ್ತಿತರ ಅಧಿಕಾರಿಗಳು ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ನಡೆದ ಕಲ್ಮಕಾರಿಗೆ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು.