
ಅಂಗನವಾಡಿ ಕಾರ‍್ಯಕರ್ತೆಯರಿಂದ ಅಹೋರಾತ್ರಿ ಧರಣಿ
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಮಾತನಾಡಿ, 2018ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡದ ಕಾರಣ ಕೇಂದ್ರ ಸರ್ಕಾರ 26 ಸಾವಿರ ರೂ. ವರೆಗೆ ಗೌರವಧನ ಹೆಚ್ಚಿಸಬೇಕು. ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು ಮತ್ತು ಅದನ್ನು ಎಲ್ಲರಿಗೂ ಅನ್ವಯಿಸಬೇಕು ಎಂದರು.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ ರಾಜ್ಯ ಸರ್ಕಾರ ರೂ. 15 ಸಾವಿರಕ್ಕೆ ಗೌರವಧನ ಹೆಚ್ಚಿಸಬೇಕು. ನಿವೃತ್ತರಾದವರಿಗೆ ಎನ್‌ಪಿಎಸ್ ಹಣ ಹಾಗೂ 10 ಸಾವಿರ ಮಾಸಿಕ ಪಿಂಚಣಿ ನೀಡಬೇಕು ಎಂದೂ ಒತ್ತಾಯಿಸಿದರು.
ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿಗಳಿಂದ ಆರಂಭಿಸಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ ಉಪಚುನಾವಣೆ ಸಂದರ್ಭಗಳಲ್ಲಿ ಮತದಾರರನ್ನು ಗುರುತಿಸುವ, ಚುನಾವಣಾ ಸಂದರ್ಭದಲ್ಲಿ ಚೀಟಿ ಹಂಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅಂಗನವಾಡಿ ನೌಕರರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸಬಾರದು ಎಂದು ಧರಣಿ ನಿರತರು ಆಗ್ರಹಿಸಿದರು.
ಧರಣಿನಿರತರು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಸಿಐಟಿಯು ಜಿಲ್ಲಾ ಘಟಕ ಆಧ್ಯಕ್ಷ ಕೆ. ಶಂಕರ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷೆ ಭಾರತಿ, ಖಜಾಂಚಿ ಯಶೋಧ, ಮುಖಂಡರಾದ ಕವಿರಾಜ್ ಕಾಂಚನ್, ಚಂದ್ರಶೇಖರ, ಕೆ.ಸುರೇಶ, ಪ್ರೇಮಾ, ಆಶಾಲತಾ, ಶಾಂತ ಉಪಸ್ಥಿತರಿದ್ದರು.