ಸರಕಾರದ ಶಿಕ್ಷಣ ನೀತಿಯಿಂದಾಗಿ ಪೋಷಕರು ಭೀತಿ: ಬಂಟ್ವಾಳ ತಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷ ಮುಳಿಯ ಶಂಕರ ಭಟ್ ಕಳವಳ

ಸರಕಾರದ ಶಿಕ್ಷಣ ನೀತಿಯಿಂದಾಗಿ ಪೋಷಕರು ಭೀತಿ: ಬಂಟ್ವಾಳ ತಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷ ಮುಳಿಯ ಶಂಕರ ಭಟ್ ಕಳವಳ


ಬಂಟ್ವಾಳ: ಅಂಗ್ಲಭಾಷಾ ವ್ಯಾಮೋಹ ಕೆಲ ಸರಕಾರಿ, ಖಾಸಗಿ ಶಾಲೆಗಳು ಸ್ಥಗಿತಗೊಳ್ಳುವಂತೆ ಮಾಡಿದ್ದು, ಸರಕಾರದ ಶಿಕ್ಷಣ ನೀತಿಯಿಂದಾಗಿ ಪೋಷಕರು ಭೀತಿಯನ್ನು ಎದುರಿಸುವಂತಾಗಿದೆ. ಎಳೆಯ ಪೀಳಿಗೆಯ ಶಿಕ್ಷಣದ ವ್ಯವಸ್ಥೆ ಮುಂದೊಂದು ದಿನ ಸಮಾಜದ ಹಳಿ ತಪ್ಪಿಸಿದರೂ ಆಶ್ಚರ್ಯವಿಲ್ಲ ಎಂದು ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕಸಾಪ ಬಂಟ್ವಾಳತಾಲೂಕು ಘಟಕದ ಆಶ್ರಯದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ(ರಿ)ದ ಸಹಯೋಗದಲ್ಲಿ ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆಯ. ಬಿ.ವಿ.ಕಾರಂತ್ ಸಭಾಂಗಣ, ದಿವಂಗತಕನ್ನಡ ಪಂಡಿತ್ ಎ.ಪಿ. ತಿಮ್ಮಯನ್ ವೇದಿಕೆಯಲ್ಲಿ ಶನಿವಾರ ಸಂಜೆ ಆರಂಭಗೊಂಡ

ಬಂಟ್ವಾಳ ತಾಲೂಕಿನ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಯಾವುದೇ ಭಾಷೆಯ ಕಲಿಕೆ ತಪ್ಪಲ್ಲ, ಅಂಗ್ಲ ಮಾಧ್ಯಮದ ಭರಾಟೆ ಮಾತೃಭಾಷೆಯ ಕಲಿಕೆಯನ್ನು ಅಪರಿಚಿತವಾಗಿಸುತ್ತದೋ ಎಂಬ ಆತಂಕ ವ್ಯಕ್ತಪಡಿಸಿದ ಅವರು ಭಾಷೆಯ ಅಧ್ಯಯನ, ಅಧ್ಯಾಪನ ಅವಿರತಬಳಕೆಯಿಂದ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಪೂರಕ ವಾತಾವರಣ ನೆಲೆಗೊಳ್ಳಬಹುದು ಎಂದರು.

ಮಕ್ಕಳು, ಯುವ ಜನತೆ ಹೆಚ್ಚು, ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಂಡಾಗ ಸಾಹಿತ್ಯಕ್ಷೇತ್ರ ಪುಷ್ಪವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲು ಸಾಹಿತಿಕ ಚಟುವಟಿಕೆಗಳು ಆಯೋಜನೆ ಯಾಗಬೇಕು ಎಂದು ಹೇಳಿದರು.

ಸಾಹಿತ್ಯ ಜನಜೀವನದ ಕೈಗನ್ನಡಿಯಾಗಿದ್ದು, ಸಾಮಾಜಿಕ ಬದುಕು, ಜನಜೀವನಕ್ಕೆ ಉತ್ತಮವಾದ ಪ್ರೇರಣೆಯನ್ನು ಸಾಹಿತ್ಯ ನೀಡುತ್ತದೆ. ಸಾಮಾಜಿಕ ಹಿತದ ಕೃತಿಗಳೆಲ್ಲವೂ ಸಾಹಿತ್ಯವೇ ಆಗಿದೆ ಎಂದ ಅವರು ಸಾಹಿತ್ಯ ರಚನೆಗೆ ನಿರಂತರವಾದ ಓದು,ಅಧ್ಯಯನದ ಅಗತ್ಯವಿದೆ ಎಂದರು.

ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಪೂರಕ ಭೂಮಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ಅಂತರಂಗದಲ್ಲೂ ನಮ್ಮ ಉಸಿರು ಕನ್ನಡವಾಗುವಂತೆ ಪಣತೊಡಬೇಕು, ಕನ್ನಡ ಭಾಷೆ, ಕನ್ನಡ ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವಲ್ಲಿಯು ಎಲ್ಲರೂ ಮುತುವರ್ಜಿ ವಹಿಸಬೇಕೆಂದರು.

ಆಕರ್ಷಕ ಮೆರವಣಿಗೆ:

ಇದಕ್ಕು ಮೊದಲು ಕುಕ್ಕಾಜೆ ಭಜನಾ ಮಂದಿರದಿಂದ ‘ಕನ್ನಡ ಭುವನೇಶ್ವರೀಯ’ ಆಕರ್ಷಕ ಮೆರವಣಿಗೆಯು ಸಮ್ಮೇಳನದ ಸಭಾಂಗಣಕ್ಕೆ ಸಾಗಿ ಬಂತು. ಸಮ್ಮೇಳನಾಧ್ಯಕ್ಷರು, ಉದ್ಘಾಟಕರು ಸಹಿತ ಅತಿಥಿಗಳನ್ನು ತೆರೆದ ವಾಹನಗಳಲ್ಲಿ ಕರೆತರಲಾಯಿತು.

ಗೊಂಬೆ ಕುಣಿತ, ವಿವಿಧ ವಾದ್ಯಗೋಷ್ಠಿ, ಚೆಂಡೆ, ಎನ್‌ಸಿಸಿ, ಸ್ಕೌಟ್ಸ್, ಮಕ್ಕಳ ಶಾರ್ದೂಲ, ಕರಡಿಕುಣಿತ, ಜಾನಪದ ಕುಣಿತ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ಮಂಚಿ ಗ್ರಾ.ಪಂ. ಅಧ್ಯಕ್ಷ ಜಿ. ಇಬ್ರಾಹಿಂ ಕನ್ನಡ ಭುವಮೇಶ್ವರಿಗೆ ಪುಪ್ಪಾರ್ಚನೆಗೈದರು. ಭಜನಾಮಂದಿರದ ಆದ್ಯಕ್ಷ ಎನ್. ಸಂಜೀವ ಆಚಾರ್ಯ ಮೆರವಣಿಗೆಯನ್ನು ಉದ್ಘಾಟಿಸಿದರು. ಉದ್ಯಮಿಗಳಾದ ರವಿಕುಮಾರ್, ರವಿ ಜಿ.ಪೂಜಾರಿ, ಜೆಪ್ರಿ ಲೂವಿಸದ, ಮಂಚಿ ಗ್ರಾ.ಪಂ. ಪಿಡಿಒ ನಿರ್ಮಲ, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ರಾಜೇಶ್ ಕುಲಾಲ್, ರಮೇಶ್ ರಾವ್ ಪತ್ತುಮುಡಿ ಮೊದಲಾದವರಿದ್ದರು.

ಧ್ವಜಾರೋಹಣ:

ಬೆಳಿಗ್ಗೆ ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಶ್ರಫ್ ಅವರು ರಾಷ್ಟ್ರ ಧ್ವಜಾರೋಹಣಗೈದರು. ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜಾರೋಹಣಗೈದರು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಕನ್ನಡ ಧ್ವಜಾರೋಹಣಗೈದರು. ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article