
ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನ: ಉಪ ರಾಷ್ಟ್ರಪತಿ
ಧರ್ಮಸ್ಥಳ: ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿಯಾದರೆ, ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು ಎಂದು ಎಂದು ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಗಳನ್ನೊಳಗೊಂಡ ನೂತನ ಸಂಕೀರ್ಣ ‘ಶ್ರೀಸಾನ್ನಿಧ್ಯ’ ಮತ್ತು 2024-25ರ ಜ್ಞಾನದೀಪ ಕಾರ್ಯಕ್ರಮದ ಶುಭಾರಂಭ ನೆರವೇರಿಸಿ ಅವರು ಮಂಗಳವಾರ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಮಾತನಾಡಿದರು.
ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಧಾರ್ಮಿಕ ಸಂಸ್ಥೆಗಳು ತಮ್ಮದೇ ಕೊಡುಗೆ ನೀಡುತ್ತಿವೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದರು.
ದೇಸ ಸೇವೆಗೆ ಮುಂದೆ ಬನ್ನಿ:
ನಾವು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು. ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪಟೋಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ಆದರೆ ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಬಾಹ್ಯ ಶಕ್ತಿಗಳು ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಮಾಡುವಂತಹ ವೈಪರೀತ್ಯಗಳು ಸಂಭವಿಸುತ್ತಿವೆ. ಇವುಗಳಿಗೆ ಪೂರ್ಣ ತಿಲಾಂಜಲಿ ನೀಡಬೇಕು. 2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ತಲುಪಬೇಕಾಗಿದೆ. ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ. ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ ಎಂದು ಹೇಳಿದರು.
ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ ಇತ್ಯಾದಿ ಬಗ್ಗೆ ಯೋಚಿಸಬೇಕು. ಅತ್ಯುನ್ನತ ನಾಗರಿಕತೆ ನಮ್ಮದು. ಯಾವುದಕ್ಕೂ ದ್ವೇಷ ಉತ್ತರವಲ್ಲ. ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಸಾಮಾಜಿಕ ಸದ್ಭಾವ ಬರಬೇಕಾದರೆ ಭಾರತಮಾತೆ ಒಂದೇ ಎಂದು ಭಾವಿಸಿದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಅವರು ಆಶಿಸಿದರು.
ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಲು ಸಿಎಸ್‌ಆರ್ ನಿಧಿಯನ್ನು ಕಾಣಿಕೆಯಾಗಿ ನೀಡುತ್ತಿವೆ. ಈ ಭೂಮಿಯನ್ನು ಪರಿಸರಸ್ನೇಹಿಯಾಗಿ ಕಾಣುವುದರ ಜೊತೆಗೆ ಎಳವೆಯಲ್ಲೇ ಮಕ್ಕಳು ಧಾರ್ಮಿಕತೆಗೆ ತೆರೆದುಕೊಳ್ಳುವಂತೆ ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆಯನ್ನು ಎಲ್ಲರಲ್ಲೂ ಬೆಳೆಸಬೇಕು ಎಂದು ಅವರು ಆಶಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅಧ್ಯಕ್ಷೆ ಡಾ. ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ.ಶ್ರೀಧರ ಭಟ್ ನಿರೂಪಿಸಿದರು.
ಧರ್ಮಸ್ಥಳದಲ್ಲಿ ಸಮಾನತೆ ದರ್ಶನ:
ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಸ್ಥಾನ ನೀಡಬಾರದು. ಇದು ದೈವತ್ವಕ್ಕೆ ವಿರುದ್ಧವಾಗಿದೆ. ಧಾರ್ಮಿಕ ಸಂಸ್ಥೆಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ, ಸಮಾನತೆಯನ್ನು ತರಬೇಕು. ಈ ಕಾರ್ಯದಲ್ಲಿ ಧರ್ಮಸ್ಥಳದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.
ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿರುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು ಸಮಾನತೆಯನ್ನು ತೋರಿಸುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಮುಕ್ತ ಕಂಠದಿಂದ ಶ್ಲಾಘಿಸಿದರು.