
ಎಂಆರ್‌ಪಿಎಲ್ ತ್ರೈಮಾಸಿಕ ಅವಧಿಗೆ 4,541.5 ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಸ್ಕರಣೆ
ಮಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಒಎನ್‌ಜಿಸಿಯ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಸರಾಸರಿ 4,541.5 ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿದೆ. ಹಿಂದಿನ ಇದೇ ಅವಧಿಯಲ್ಲಿ ಸರಾಸರಿ 4,479.7 ಸಾವಿರ ಮೆಟ್ರಿಕ್ ಟನ್ ತೈಲ ಸಂಸ್ಕರಿಸಲಾಗಿತ್ತು. ಈ ಅವಧಿಯಲ್ಲಿ ಒಟ್ಟು 4,601.0 ಸಾವಿರ ಮೆಟ್ರಿಕ್ ಟನ್ ತೈಲ ಸಂಸ್ಕರಿಸಿದ್ದು, ಕಳೆದ ಅವಧಿಯಲ್ಲಿ ಇದು 4,479.7 ಸಾವಿರ ಮೆಟ್ರಿಕ್ ಟನ್ ಆಗಿತ್ತು.
ವೆನಿಜುವೆಲಾದಿಂದ ಆಮದಾದ ಮೆರೀ-16 ಕಚ್ಚಾ ತೈಲವನ್ನು ಕಳೆದ ನವೆಂಬರ್‌ನಲ್ಲಿ ಸಂಸ್ಕರಿಸಲಾಯಿತು. ಎಟಿಎಫ್(ಅಟೋಮಿಕ್ ಟ್ರಾನ್ಸ್‌ಮಿಷನ್ ಫ್ಯೂಯಿಡ್) 763.1 ಸಾವಿರ ಮೆಟ್ರಿಕ್ ಟನ್ ಆಗಿದ್ದು, ಕಳೆದ ಅವಧಿಯಲ್ಲಿ ಇದು 747.5 ಸಾವಿರ ಮೆಟ್ರಿಕ್ ಟನ್ ಆಗಿದೆ. 60.6 ಸಾವಿರ ಮೆಟ್ರಿಕ್ ಟನ್ ಬೆನ್‌ಜೀನ್ ಪಡೆಯಲಾಗಿದ್ದು, ಕಳೆದ ಅವಧಿಯಲ್ಲಿ ಇದು 49.7 ಸಾವಿರ ಮೆಟ್ರಿಕ್ ಟನ್ ಆಗಿತ್ತು.
ಕಳೆದ ಅವಧಿಯಲ್ಲಿ 25,601 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ಬಾರಿ ಈ ಆದಾಯ 28,364 ಕೋಟಿ ರೂ. ಆಗಿತ್ತು. ತೆರಿಗೆ ಮುಂಚಿನ ಲಾಭ 469 ಕೋಟಿ ರೂ. ಆಗಿದ್ದು, ಕಳೆದ ಅವಧಿಯಲ್ಲಿ ಇದು 591 ಕೋಟಿ ರೂ. ಆಗಿತ್ತು. ತೆರಿಗೆ ನಂತರದ ಲಾಭ 304 ಕೋಟಿ ರೂ. ಆಗಿದ್ದು, ಕಳೆದ ಬಾರಿ 387 ಕೋಟಿ ರೂ. ದಾಖಲಾಗಿತ್ತು.
ಕಳೆದ ಒಂಭತ್ತು ತಿಂಗಳಲ್ಲಿ 81,676 ಕೋಟಿ ರೂ. ಆದಾಯ ದಾಖಲಿಸಿದ್ದು, ಕಳೆದ ಅವಧಿಯಲ್ಲಿ ಇದು 76,033 ಕೋಟಿ ರೂ. ಆಗಿತ್ತು ಎಂದು ಎಂಆರ್‌ಪಿಎಲ್ ಪ್ರಕಟಣೆ ತಿಳಿಸಿದೆ.