
ಗಾಂಜಾ ಮಾರಾಟ ಆರೋಪಿಗೆ ಕಠಿಣ ಸಜೆ
ಉಡುಪಿ: ಕಳೆದ ಎಂಟು ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿತನಾಗಿದ್ದ ಅಂಬಲಪಾಡಿಯ ಅಖಿಲೇಶ್ ಶೆಟ್ಟಿ (25) ಎಂಬಾತನಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ದೋಷಿ ಎಂದು ಪರಿಗಣಿಸಿ 2 ವರ್ಷ 6 ತಿಂಗಳ ಕಠಿಣ ಸಜೆ ಮತ್ತು 20 ಸಾವಿರ ರೂ ದಂಡ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.
2016ರ ಜು.5ರಂದು ಉಡುಪಿಯ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ರತ್ನಕುಮಾರ್ ಜಿ. ಅವರು ಕಡೆಕಾರು ಗ್ರಾಮದ ಕನ್ನರ್ಪಾಡಿ ದುರ್ಗಾಪರಮೇಶ್ವರಿ ಯುವಕ ಮಂಡಲ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ, ಜಿಲ್ಲಾ ಎಸ್‌ಪಿ ಅನುಮತಿ ಪಡೆದು, ಪತ್ರಾಂಕಿಕ ಅಧಿಕಾರಿ ಉಡುಪಿ ತಹಶೀಲ್ದಾರ್ ಗುರುಪ್ರಸಾದ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು.
ಆ ವೇಳೆ ಆರೋಪಿ ಅಖಿಲೇಶ್, ಪೊಲೀಸರನ್ನು ನೋಡಿ ಆತ ಓಡಲು ಪ್ರಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 1 ಕೆ.ಜಿ 150 ಗ್ರಾಂ ಗಾಂಜಾ ಪತ್ತೆಯಾಗಿತ್ತು. ತನಿಖೆಯಲ್ಲಿ ತಾನು ಗಾಂಜಾ ಉಪಯೋಗಿಸುತ್ತಿದ್ದು, ಉಡುಪಿ ಹಾಗೂ ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದ.
ಪೊಲೀಸ್ ನಿರೀಕ್ಷಕ ರತ್ನಕುಮಾರ್ ಜಿ. ಗಾಂಜಾ ವಶಪಡಿಸಿ ಆರೋಪಿಯನ್ನು ಬಂಧಿಸಿ, ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಉಡುಪಿ ವೃತ್ತ ನಿರೀಕ್ಷಕ ಟಿ.ಆರ್. ಜಯಶಂಕರ್ ತನಿಖೆ ನಡೆಸಿ ಆರೋಪಿ ವಿರುದ್ಧ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.