
ಬ್ಯಾರಿ ಅಭಿವೃದ್ಧಿ ನಿಗಮ, ತಜ್ಞರ ಸಮಿತಿ ರಚನೆ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯು ಸಹಜವಾದುದು. ಆದರೆ ಸ್ಥಾಪನೆಗೆ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ನಿಗಮ ಸ್ಥಾಪಿಸಿದರೆ ಅದರಿಂದ ಬ್ಯಾರಿ ಜನಾಂಗಕ್ಕೆ ಯಾವ ಪ್ರಯೋಜನವಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕಿದೆ. ಅದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಸಲಹೆ ನೀಡಿದರು.
ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಮರ್ಹೂಂ ಬಿ.ಎಂ.ಇದಿನಬ್ಬ ಮತ್ತು ಮರ್ಹೂಂ ಬಿ.ಎ.ಮೊಯ್ದಿನ್ ಅವರ ನೆನಪಿನಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದ ಮರ್ಹೂಂ ಯು.ಟಿ. ಫರೀದ್ ವೇದಿಕೆಯಲ್ಲಿ ಬುಧವಾರ ನಡೆದ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೆ ಸರಕಾರ ಸ್ಥಾಪಿಸಿದ ಕೆಲವು ನಿಗಮಗಳಿಗೆ ಅಧ್ಯಕ್ಷ, ಸದಸ್ಯರ ನೇಮಕವಾಗಿಲ್ಲ. ಅನುದಾನವೂ ಬಿಡುಗಡೆ ಮಾಡಿಲ್ಲ. ಬ್ಯಾರಿ ಅಭಿವೃದ್ಧಿ ನಿಗಮ ಹಾಗಾಗಬಾರದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಬ್ಯಾರಿ ಮುಸ್ಲಿ ಮರಿಗೆ ಅನೇಕ ಯೋಜನೆಗಳನ್ನು ನೀಡಲಾಗುತ್ತದೆ. ಅದರಿಂದ ಬ್ಯಾರಿ ಮುಸ್ಲಿಮರಿಗೆ ಎಷ್ಟು ಪ್ರಮಾಣದಲ್ಲಿ ಪ್ರಯೋಜನ ವಾಗಿದೆ ಎಂಬುದರ ಅಂಕಿ ಅಂಶ ಪಡೆದು ಅಧ್ಯಯನ ನಡೆಸಬೇಕು. ಈಗ ಕೊಡುವ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ಹೊಸ ನಿಗಮಕ್ಕೆ ಕೊಟ್ಟರೆ ಬ್ಯಾರಿ ಜನಾಂಗಕ್ಕೆ ನಷ್ಟವಾದೀತು. ನಿಗಮ ಸ್ಥಾಪಿಸುವ ಮುನ್ನ ಇದನ್ನೆಲ್ಲಾ ಯೋಚಿಸಬೇಕಿದೆ ಎಂದು ಹೇಳಿದರು.
ಬ್ಯಾರಿಗಳು ಶ್ರಮಜೀವಿಗಳು, ಸ್ವಾಭಿಮಾನಿಗಳು. ಹಿಂದೆ ಹಳ್ಳಿಗಾಡಿನಲ್ಲಿ ಬ್ಯಾರಿ ಹಿರಿಯರು ನಡೆದಾಡುವಾಗ ಇತರ ಸಮುದಾಯದವರು ಗೌರವ ನೀಡುತ್ತಿದ್ದರು. ಆ ಗೌರವವನ್ನು ನಾವೂ ಪಡೆಯಲು ಶ್ರಮಿಸಬೇಕು, ಜನಾಂಗಕ್ಕೆ ಚ್ಯುತಿ ಬಾರದಂತೆ ಯುವ ಪೀಳಿಗೆಯು ಎಚ್ಚರ ವಹಿಸಬೇಕು ಎಂದ ಖಾದರ್, ಇಂದು ಎಲ್ಲೇ ಅವಘಡಗಳು ಸಂಭವಿಸಲಿ. ಅಲ್ಲಿ ತಕ್ಷಣ ಬ್ಯಾರಿ ಯುವಕರು ಹಾಜರಾಗಿ ಸೇವೆಯಲ್ಲಿ ನಿರತರಾಗುತ್ತಿರುವ ಬಗ್ಗೆ ಇತರರು ಪ್ರಶಂಸಿಸುತ್ತಾರೆ. ಇದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಸಮಾಜದಲ್ಲಿ ಒಗ್ಗಟ್ಟು ಮುಖ್ಯ. ಯಾವ ಕಾರಣಕ್ಕೂ ಬಿಗ್ಗಟ್ಟಿಗೆ ಆಸ್ಪದ ನೀಡಬೇಡಿ. ಶಿಕ್ಷಣವು ಸಮಾಜದ ಅಭಿವೃದ್ಧಿಯ ಕೀಲಿ ಕೈ ಆಗಿದೆ. ಹಾಗಾಗಿ ಪ್ರತಿಯೊಂದು ಜಮಾಅತ್ನಲ್ಲೂ ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಅಂಕಿ ಅಂಶದ ಪಟ್ಟಿ ಯನ್ನು ಸಿದ್ಧಪಡಿಸಿಕೊಳ್ಳಿ ಎಂದು ಖಾದರ್ ಸೂಚಿಸಿದರು.
ಮಹಾಸಭಾದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ದ.ಕ.ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್, ಜಮೀಯ್ಯತುಲ್ ಫಲಾಹ್ ದ.ಕ.-ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಮಾಜಿ ಮೇಯರ್ ಕೆ.ಅಶ್ರಫ್, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಮೋನು ಕತ್ತರ್, ಮುಹಮ್ಮದ್ ಹನೀಫ್ ಹಾಜಿ, ಅನ್ವರ್ ಸಾದಾತ್ ಬಜತ್ತೂರು, ನಾಸಿರ್ ಆರ್ಟಿಒ ಬೆಂಗಳೂರು, ಸುಲ್ತಾನ್ ಜುವೆಲ್ಲರ್ನ ಅಬ್ದುಲ್ ರವೂಫ್, ಎಸ್ಕೆಎಸ್‌ಎಂ ಸಂಘಟನೆಯ ಅಹ್ಮದ್ ಅನ್ಸಾರ್ ಮತ್ತಿತರರು ಭಾಗವಹಿಸಿದ್ದರು.
ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಮಡಿಕೆಗೆ ಹಿಡಿ ಅಕ್ಕಿ ಹಾಕುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಸಮಾವೇಶವನ್ನು ಉದ್ಘಾಟಿಸಿದರು.
ಅಖಿಲ ಭಾರತ ಬ್ಯಾರಿ ಮಹಾಸಭಾದ ಗೌರವ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಆಲೈಡ್ ಆಂಡ್ ಹೆಲ್ತ್ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ.ಇಫಿಕಾರ್ ಆಲಿ ಫರೀದ್ ಅವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು.
ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಸ್ವಾಗತಿಸಿದರು. ಹಮೀದ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಕ್ಬಾಲ್ ಮುಲ್ಕಿ ನಿರ್ಣಯಗಳನ್ನು ಮಂಡಿಸಿದರು. ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು.