
ಮಂಗಳೂರಿನಲ್ಲಿ ಸಾವು ಕೇರಳದಲ್ಲಿ ಪುನರ್ಜನ್ಮ..
ಮಂಗಳೂರು; ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ೬೭ ವರ್ಷದ ಪವಿತ್ರನ್ ಎಂಬವರನ್ನು ಮನೆಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ಭಾವಿಸಿ ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಂತೆ ಅವರ ದೇಹದಲ್ಲಿ ಸಂಚಲನ ಮೂಡಿ ಪುನರ್ಜೀವನ ಪಡೆದ ಘಟನೆ ನಡೆದಿದೆ.
ಪವಿತ್ರನ್ ಅವರು ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಹಿನ್ನಲೆ ವೈದ್ಯರು, ಯಾವುದೇ ಭರವಸೆ ಇಲ್ಲ ಎಂದು ಕುಟುಂಬಕ್ಕೆ ತಿಳಿಸಿದ್ದರು.
ಅದರಂತೆ ಪವಿತ್ರನ್‌ರನ್ನು ಜ.13ರಂದು ಸಂಜೆ ಕೇರಳ ಕಣ್ಣೂರಿನ ವೆಳ್ಳುವಕಂಡಿಗೆ ಕೊಂಡೊಯ್ಯುತ್ತಿದ್ದಾಗ ದೇಹ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಿದ ಕುಟುಂಬಸ್ಥರು ಕಣ್ಣೂರಿನ ಎ.ಕೆ.ಜಿ ಆಸ್ಪತ್ರೆಯಲ್ಲಿ ಅವರ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಆಸ್ಪತ್ರೆಯ ಎಲೆಕ್ಟ್ರೀಷಿಯನ್ ಅನೂಪ್ ಮತ್ತು ರಾತ್ರಿ ಸೂಪರ್‌ವೈಸರ್ ಆರ್ ಜಯನ್ ಎಂಬ ಇಬ್ಬರು ಸಿಬ್ಬಂದಿ ಪವಿತ್ರನ್ ಅವರ ಕೈಯಲ್ಲಿ ಸ್ವಲ್ಪ ಚಲನೆಯನ್ನು ಗಮನಿಸಿದರು. ಆರಂಭದಲ್ಲಿ ಪ್ರತಿಫಲಿತವೆಂದು ಪರಿಗಣಿಸಲಾಗಿದ್ದರೂ, ಗಮನವಿಟ್ಟ ಸಿಬ್ಬಂದಿಗಳು ನಾಡಿಮಿಡಿತವನ್ನು ಪರಿಶೀಲಿಸಿದರು. ಜೀವ ಇದೆ ಎಂದು ಅರಿತ ಅವರು ಪವಿತ್ರನ್ ಅವರನ್ನು ತುರ್ತು ವಿಭಾಗಕ್ಕೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಅವರು ನಿಜವಾಗಿಯೂ ಜೀವಂತವಾಗಿದ್ದಾರೆ ಎಂದು ದೃಢಪಡಿಸಿದರು.
ಬೆಳಕಿನ ಹೊತ್ತಿಗೆ, ಪವಿತ್ರನ್ ಅವರು ಪ್ರಜ್ಞೆ ಪಡೆದರು, "ಅವರು ನನ್ನತ್ತ ನೋಡಿದರು," ಎಂದು ಅವರ ಪತ್ನಿ ಸುಧಾ ತಿಳಿಸಿದ್ದಾರೆ. ಕೆಲವು ಗಂಟೆಗಳ ಹಿಂದೆ ಮೃತಪಟ್ಟಿದ್ದ ಪವಿತ್ರನ್ ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದಾಗ ಕುಟುಂಬಕ್ಕೆ ನಂಬಲು ಅಸಾಧ್ಯವಾಗಿತ್ತು. ಸದ್ಯ ಪವಿತ್ರನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಆಸ್ಪತ್ರೆ ಹೇಳಿಕೆ..
ಪವಿತ್ರನ್ ಅವರನ್ನು ಮಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಕೇಳಿಕೊಂಡಿದ್ದರು, ಅದರಂತೆ ಬಿಡುಗಡೆ ಮಾಡಲಾಗಿದೆ. ಪವಿತ್ರನ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಿಂದ ಯಾವುದೇ ದೃಢಪತ್ರ ನೀಡಿಲ್ಲ ಎಂದು ಖಾಸಗಿ ಆಸ್ಪತ್ರೆ ತಿಳಿಸಿದೆ.