
ಪಾಲಿಕೆ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ
ಮಂಗಳೂರು: ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಪಾಲಿಕೆಯ ಹಿರಿಯ ಸದಸ್ಯ ಅಬ್ದುಲ್ ರವೂಫ್ ಅವರು ಪಾಲಿಕೆಯ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಲ್ಲದೆ, ತನ್ನ ಆರೋಪ ಸುಳ್ಳಾಗಿದ್ದಲ್ಲಿ ನಿವೃತ್ತಿ ಘೋಷಣೆ ಮಾಡುವುದಾಗಿ ಹೇಳಿದ ಘಟನೆ ಶನಿವಾರ ನಡೆಯಿತು.
ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಘಟನೆ ನಡೆಯಿತು.
ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಆನಂದ್ ಸಿ.ಎಲ್. ಅವರು, ನಾನು ಸಾರ್ವಜನಿಕ ಅಧಿಕಾರಿ. ಯವುದೇ ಸಂದರ್ಭದಲ್ಲಿಯೂ ತನಿಖೆಗೆ ಸಿದ್ಧನಿರುತ್ತೇನೆ ಎಂದು ಸವಾಲು ಹಾಕಿದರು.
ಸದಸ್ಯರ ವಾಗ್ವಾದ..:
ಮಂಗಳೂರು ಮಹಾನಗರ ಪಾಲಿಕೆಯ ಸ್ವಯಂಘೋಷಿತ ಆಸ್ತಿ ತೆರಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ ಯಾದರೂ ಪಾಲಿಕೆ ಸಾಪ್ಟ್‌ವೇರ್‌ನಲ್ಲಿ ಮಾತ್ರ ಇದು ಇನ್ನೂ ಬದಲಾಗಿಲ್ಲ. ಇದಕ್ಕೆ ಕ್ರಮ ವಹಿಸಬೇಕು ಎಂದಾಗ, ಎ.ಸಿ. ವಿನಯ್‌ರಾಜ್ ಮಾತನಾಡಿ, ಒಮ್ಮೆ ತೆರಿಗೆ ಏರಿಕೆ ಮಾಡಿದ ಮೇಲೆ ಮತ್ತೆ ಅದರಲ್ಲಿ ಬದಲಾವಣೆ ತರಲು ಕಾನೂನು ಸಲಹೆಯ ಅಗತ್ಯವಿದೆ ಎಂದರು. ಈ ಬಗ್ಗೆ ಆಕ್ಷೇಪಿಸಿದ ಪ್ರೇಮಾನಂದ ಶೆಟ್ಟಿ, ‘ತೆರಿಗೆ ಏರಿಕೆಯಾಗಿರುವುದನ್ನು ತಪ್ಪಿಸಿ ಜನರಿಗೆ ಉಪಕಾರ ಮಾಡುವ ಕಾಲದಲ್ಲಿ ಕಾಂಗ್ರೆಸ್ ಆಯುಕ್ತರ ಮೂಲಕ ಕಾನೂನಾತ್ಮಕ ತೊಡಕು ಬಗ್ಗೆ ಹೇಳುವುದು ಸರಿಯಲ್ಲ’ ಎಂದರು.
ಈ ವಿಷಯದಲ್ಲಿ ಕೆಲ ಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಮೇಯರ್ ಮನೋಜ್ ಕುಮಾರ್, ತೆರಿಗೆ ಬದಲಾವಣೆ ಆಗಿರುವುದನ್ನು ಕಂಪ್ಯೂಟರ್‌ನಲ್ಲಿ ದಾಖಲೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.