
ರಾಜ್ಯದಲ್ಲಿರುವುದು ದಿಕ್ಕು ದೆಸೆ ಇಲ್ಲದ ಸರಕಾರ: ಚೌಟ
ಮಂಗಳೂರು: ರಾಜ್ಯದಲ್ಲಿ ಆರ್ಥಿಕತೆ ದಿವಾಳಿಯಾಗಿದ್ದರೆ ಡ್ರಗ್ಸ್, ದರೋಡೆ ಹೆಚ್ಚಾಗಿದೆ, ಇದೊಂದು ದಿಕ್ಕುದೆಸೆ ಇಲ್ಲದ ದಗಲ್ಬಾಜಿ ಸರಕಾರ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿಯಾಗಿರುವುದು ಸುಸ್ಪಷ್ಟವಾದರೂ ಅವರಿಗೆ ಯಾವುದೇ ರಾಜಕೀಯ ವಿನಮ್ರತೆ ಎಂಬುದಿಲ್ಲ, ಅಧಿಕಾರಕ್ಕೆ ಇನ್ನೂ ಅಂಟಿಕೊಂಡು ಕೂತಿದ್ದಾರೆ, ಅವರು ರಾಜಿನಾಮೆ ಕೊಡಲಿ ಎಂದು ಆಗ್ರಹಿಸಿದರು.
ಜಿಹಾದಿಗಳಿಗೆ ಬೆಂಬಲ ನೀಡಿಕೊಂಡು ಆರ್ಥಿಕತೆಯನ್ನು ಪಾತಾಳಕ್ಕೆ ತಂದಿದ್ದಾರೆ, ಸರಕಾರ ಬಂದ ಬಳಿಕ ರಾಜ್ಯದಲ್ಲಿ 2023-24ರ ಸಾಲಿನಲ್ಲಿ 563 ಅತ್ಯಾಚಾರ ಕೇಸ್ ನಡೆದಿದೆ, ಅದರಲ್ಲಿ ಬೆಂಗಳೂರಿನಲ್ಲೇ 178 ಪ್ರಕರಣಗಳಿವೆ. 2024ರಲ್ಲಿ ನವೆಂಬರ್ ವರೆಗೆ ರಾಜ್ಯದಲ್ಲಿ 540 ರೇಪ್ ನಡೆದಿದ್ದರೆ ಬೆಂಗಳೂರಿನಲ್ಲಿ 166 ನಡೆದಿದೆ. ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಮಹಿಳೆಯರು ಯಾವುದೇ ರೀತಿ ಸುರಕ್ಷಿತರಲ್ಲ ಎನ್ನುವ ಭಾವನೆ ಬಂದಿದೆ ಎಂದರು.
ಸೋತಿರುವ ಕಾಂಗ್ರೆಸ್ ಪುಢಾರಿಗಳು ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ,ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕೃಪಾಪೋಷಿತ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ಸರಕಾರ ಇರುವಾಗ ಜನರಾಗಲಿ, ದನಗಳಾಗಲೀ ಸುರಕ್ಷಿತರಲ್ಲ ಎನ್ನುವುದು ಕಂಡುಬರುತ್ತಿದೆ. ಪಿಎಫ್‌ಐ ವಿರುದ್ಧದ, ಅಲ್ಲದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಗಳನ್ನು ಹಿಂಪಡೆದು ಜಿಹಾದಿಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಚಕಾರವೆತ್ತುತ್ತಿಲ್ಲ, ಈ ಎಲ್ಲ ವಿಚಾರದ ಬಗ್ಗೆ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ, ಲೋಕಸಭೆಯಲ್ಲೂ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ವಾಮಂಜೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಶೂಟೌಟ್ ಪ್ರಕರಣದಲ್ಲಿ ಲೈಸೆನ್ಸ್ ಇಲ್ಲದ ಪಿಸ್ತೂಲ್ ಹೇಗೆ ಬಂತು, ಯಾಕಾಗಿ ತಂದಿದ್ದಾರೆ? ಯಾವುದೇ ಹಿಂದೂ ಮುಖಂಡರನ್ನು ತೆಗೆಯಲು ತಂದಿದ್ದಾರೆಯೇ ಇತ್ಯಾದಿ ಪ್ರಶ್ನೆಗಳಿಗೆ ಪೊಲೀಸರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ, ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದ ಅವರು.
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಕೆಲವು ಸ್ಥಳೀಯರು ಸಂಚು ಹೂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿಬರುತ್ತಿದೆ, ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಸ್ಪಷ್ಟತೆ ಇನ್ನೂ ಬಂದಿಲ್ಲ ಎಂದರು.
ತೇಪೆ ಹಚ್ಚುವ ಯತ್ನ..:
ಶಾಸಕ ವೇದವ್ಯಾಸ ಕಾಮತ್ ಅವರಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಬೆಂಬಲಿಗ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಽಸಿ ನಾಯಕರು ತೇಪೆ ಹಚ್ಚಿದ್ದಾರೆ.
ಕೆಲದಿನಗಳ ಹಿಂದೆ ಫುಡ್‌ಫಿಯೆಸ್ಟ ಸಂದರ್ಭದಲ್ಲಿ ಆದ ಈ ಘಟನೆ ಸಹಜವಾದದ್ದು, ನಮ್ಮಲ್ಲೇನೂ ಭಿನ್ನಮತವಿಲ್ಲ, ದೊಡ್ಡ ಕುಟುಂಬದಲ್ಲಿ ಅಭಿಪ್ರಾಯಭೇದ ಸಾಮಾನ್ಯ ಎಂದು ವೇದವ್ಯಾಸ ಕಾಮತ್ ಸ್ಪಷ್ಟ್ರೀಕರಣ ನೀಡಿದರು. ಸಂಸದ ಚೌಟ ಕೂಡಾ ನಮ್ಮದು ಅತಿ ದೊಡ್ಡ ಪಕ್ಷ, ಪ್ರಜಾಪ್ರಭುತ್ವ ರೀತಿಯಲ್ಲಿ ಕಾರ್ಯವೆಸಗುತ್ತದೆ, ಎಲ್ಲರಿಗೂ ಅಭಿಪ್ರಾಯ ಹೇಳುವುದಕ್ಕೆ ಸ್ವಾತಂತ್ರ್ಯಕೂಡಾ ಇದೆ, ಅಂತಹ ಯಾವ ಘಟನೆಯನ್ನೂ ಬೆಳೆಸಿಕೊಂಡು ಹೋಗುವುದಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ತಿಲಕ್‌ರಾಜ್, ಪ್ರೇಮಾನಂದ ಶೆಟ್ಟಿ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು.