
ಮೈಕ್ರೋ ಫೈನಾನ್ಸ್ ದುಷ್ಟಜಾಲದ ಮೇಲೆ ಸೂಕ್ತ ಕಾನೂನು ರೂಪಿಸಲು ಸಿಪಿಎಂ ಆಗ್ರಹ
Friday, January 24, 2025
ಮಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ದುಷ್ಟಜಾಲದ ಕಿರುಕುಳ, ದುಬಾರಿ ಬಡ್ಡಿಯ ಸಾಲದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರ. ಸರ್ಕಾರ ಕೂಡಲೆ ಇಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಸ್ಪಷ್ಟ ಕಾನೂನು ರೂಪಿಸಬೇಕು ಎಂದು ಸಿಪಿಎಂನ ನೂತನ ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್ ಕೆ. ಆಗ್ರಹಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳ ಸಾಲ ನೀಡಿಕೆ, ಬಡ್ಡಿದರ ನಿಗದಿ, ಕಂತು ಪಾವತಿ ಸೇರಿದಂತೆ ಒಟ್ಟು ವ್ಯವಹಾರ ನಿಯಂತ್ರಿಸಲು ಕಾನೂನು ಜಾರಿ ಮಾಡುವುದು ಅತ್ಯಗತ್ಯ. ಮೈಕ್ರೋ ಫೈನಾನ್ಸ್‌ಗಳು ಬಲವಂತದ ಸಾಲ ವಸೂಲಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಯುಜಿಸಿ ನಿಬಂಧನೆಗೆ ವಿರೋಧ:
ಕೇಂದ್ರ ಸರ್ಕಾರವು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ನಿಬಂಧನೆಗಳು-2025 ಮೂಲಕ ರಾಜ್ಯಗಳ ಅಧಿಕಾರವನ್ನು ತನ್ನ ಅಧೀನಕ್ಕೆ ತರಲು ಯತ್ನ ಮಾಡಿರುವುದು ಖಂಡನೀಯ. ಇದು ಜಾರಿಯಾದರೆ ವಿವಿ ಕುಲಪತಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಕೇಂದ್ರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ರಾಜ್ಯಗಳ ಹಕ್ಕು ಮೊಟಕಾಗಲಿದೆ. ಈ ನಿಬಂಧನೆ ಜಾರಿಗೆ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಡಾ.ಪ್ರಕಾಶ್ ಎಚ್ಚರಿಸಿದರು.
ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಎಂಬುದನ್ನು ಪ್ರಕಟಿಸಿದೆ. ಇದು ಕಾರ್ಪೊರೇಟ್ ಸಂಸ್ಕರಣಾದಾರರು, ರಫ್ತುದಾರರಿಂದ ನೇರವಾಗಿ ಗದ್ದೆಗಳಿಂದಲೇ ಖರೀದಿ ಮಾಡಲು ಅವಕಾಶ ನೀಡಿ ಸಾಂಪ್ರದಾಯಿಕ ಮಾರುಕಟ್ಟೆ ಯಾರ್ಡ್‌ಗಳ ನಿಯಂತ್ರಣವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಒಪ್ಪಿಸುವ ಹುನ್ನಾರ. ಈ ಕರಡು ನೀತಿಯ ವಿರುದ್ಧ ಕಿಸಾನ್ ಸಭಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಆರಂಭಿಸಿರುವ ಆಂದೋಲನಕ್ಕೆ ಸಿಪಿಎಂ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಕೃಷಿ ವಿರೋಧಿ ತಿದ್ದುಪಡಿ ವಾಪಸ್‌ಗೆ ಆಗ್ರಹ:
ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತ ಮತ್ತು ಕೃಷಿ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದುವರೆಗೂ ತಿದ್ದುಪಡಿ ವಾಪಸ್ ಮಾಡಿಲ್ಲ. ಇದನ್ನು ವಿರೋಧಿಸಿ ಫೆ.10ರಿಂದ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ಸಿಪಿಎಂ ಇದಕ್ಕೆ ಬೆಂಬಲ ಘೋಷಿಸಿರುವುದಾಗಿ ಹೇಳಿದರು.
ಕಾಂಗ್ರೆಸ್ ಉತ್ತಮ ಪಕ್ಷ ಅಂತ ಬೆಂಬಲ ನೀಡಿದ್ದಲ್ಲ: ಡಾ.ಪ್ರಕಾಶ್
ಕಾಂಗ್ರೆಸ್ ಉತ್ತಮ ಪಕ್ಷ ಎಂಬ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಸಿಪಿಎಂ ಬೆಂಬಲ ಕೊಟ್ಟದ್ದಲ್ಲ. ಅಪಾಯಕಾರಿಯಾದ ಪಕ್ಷವನ್ನು ಸೋಲಿಸಲು ಬೆಂಬಲ ನೀಡಿದ್ದಷ್ಟೇ ಎಂದು ಸ್ಪಷ್ಟಪಡಿಸಿದ ಡಾ.ಪ್ರಕಾಶ್, ಚುನಾವಣೆ ವೇಳೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ ಎಂಬ ಮಾತ್ರಕ್ಕೆ ಅದರ ಜನ ವಿರೋಧಿ ನೀತಿಗಳನ್ನು ವಿರೋಧಿಸಲು ಮುಲಾಜಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾದ ಮೂರನೇ ಪಕ್ಷ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಪ್, ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಂ. ಭಟ್ ಇದ್ದರು.