
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಿರ್ಮಾಣಗೊಂಡ ನೂತನ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ಲೋಕಾರ್ಪಣೆ
Saturday, January 25, 2025
ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ರೀಡೆಯನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ನೂತನ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣದ ಸಂಕೀರ್ಣವನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಇಂದು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಯಾ. ಬ್ರಿಜೇಶ್ ಚೌಟ ಅವರು ದೀಪ ಬೆಳಗಿಸಿ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣದ ನಾಮ ಫಲಕವನ್ನು ಅನಾವರಣಗೊಳಿಸಿ ವಿದ್ಯಾರ್ಥಿಗಳ ಜೊತೆ ಶಟಲ್ ಕಾಕ್ ಅಂಕಣದಲ್ಲಿ ಆಡುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಜೀವನದಲ್ಲಿ ನಾವು ಅಯ್ಕೆ ಮಾಡಿರುವ ಗುರಿ ಮತ್ತು ಅದರಲ್ಲಿ ಉನ್ನತವಾದ ವಿಚಾರವನ್ನು ನಮ್ಮಲ್ಲಿ ಅಳವಡಿಸಲು ಪ್ರಯತ್ನಸಬೇಕು ಪ್ರಯತ್ನಿಸಬೇಕು. ಇದೇ ತರಹ ಗುರಿಯಿಟ್ಟುಕೊಂಡು ಸಾಧನೆ ಮಾಡಿದವರು ಮೇಜರ್ ಧ್ಯಾನ್ ಚಂದ್. ಇಂದಿಗೂ ಇಡಿ ವಿಶ್ವದಲ್ಲಿ ಧ್ಯಾನ್ ಚಂದ್ ಎಂದರೆ ಹಾಕಿ, ಹಾಕಿ ಎಂದರೆ ಧ್ಯಾನ್ ಚಂದ್. ಇವರ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಓದುವಂತಾಗಬೇಕು. ನಮ್ಮ ಜೀವನ ಒಮ್ಮೆ ಮಾತ್ರ ಬರುವುದು. ಈ ಸುಂದರವಾದ ಜೀವನವನ್ನು ಭಯ ಮುಕ್ತವಾಗಿ ಉತ್ಸಾಹದಿಂದ ಮುನ್ನಡೆಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸೈನ್ಯದಲ್ಲಿ ಹಾಗೂ ಹಾಕಿಯಲ್ಲಿ ಸಾಧನೆ ಮಾಡಿ ಬದುಕಿದವರು ಮೇಜರ್ ಧ್ಯಾನ್ ಚಂದ್. ಇಂದು ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಭಾರತಕ್ಕೆ ಒಂದು ಸಾಂಸ್ಕೃತಿಕ ಹಿನ್ನೆಲೆ, ಪರಂಪರೆ ಇದೆ. ಈ ಪರಂಪರೆಯನ್ನು ರೂಪುಗೊಳಿಸಿ ಬೆಳೆಸಿದ ಮಹಾನ್ ಪುರುಷರ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಭಾರತ ಒಂದು ವಿಶಿಷ್ಟ ಸಂಸ್ಕೃತಿಯ ಜೀವನ ಪದ್ಧತಿ ಇರುವ ದೇಶ. ನಮ್ಮ ದೇಶ ವಿಶ್ವಕ್ಕೆ ಶಾಂತಿಯನ್ನು ಹೇಳಿಕೊಟ್ಟ ವಿಶಿಷ್ಟವಾದ ರಾಷ್ಟ್ರ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ನಾಯಕತ್ವದ ಅವಶ್ಯಕತೆ ಇದೆ ಎಂದರು.
ನಾಯಕನಾದವನು ನಡೆ ನುಡಿಗಳಿಂದ ಇನ್ನೊಬ್ಬರಿಗೆ ಮಾದರಿಯಾಗುತ್ತಾನೆ. ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ತಂಡವನ್ನು ನಡೆಸುವವನೆ ನಿಜವಾದ ನಾಯಕ. ನಾವೆಲ್ಲ ನಾಯಕತ್ವದ ಮನಸ್ಥಿತಿಯನ್ನು ರೂಢಿಸಿಕೊಂಡು ಭವಿಷ್ಯದ ನಾಯಕರಾಗಿ ತಯಾರಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಈ ಮಣ್ಣು ಪವಿತ್ರವಾದ ಮಣ್ಣು. ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗ್ಯವಂತರು. ಈ ಶಕ್ತಿ ವಿದ್ಯಾ ಸಂಸ್ಥೆ ಮಕ್ಕಳಿಗೆ ಶಕ್ತಿಯನ್ನು ನೀಡಲಿ. ಭವಿಷ್ಯದಲ್ಲಿ ಸಧೃಢ ರಾಷ್ಟ್ರವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಇರಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಸ್ತಾವಿಕವಾಗಿ ಶಕ್ತಿ ವಿದ್ಯಾ ಸಂಸ್ಥೆಯ ಕ್ರೀಡಾ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.
ಈ ಸಂಕೀರ್ಣವು ಸುಮಾರು 3000 ಚ.ಅಡಿಯಲ್ಲಿ ನಿರ್ಮಾಣಗೊಂಡಿದ್ದು, ಈ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಂಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಕ್ಯಾರಮ್ ಹಾಗೂ ಇತರೆ ಕ್ರೀಡೆಗಳು ಒಳಗೊಂಡಿರುತ್ತದೆ. ಈ ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಹೊನಲು ಬೆಳಕಿನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
2022-23ರ ಶೈಕ್ಷಣಿಕ ವರ್ಷದಿಂದ 2024-25ನೇ ಶೈಕ್ಷಣಿಕ ವರ್ಷದ ವರೆಗೆ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ವಿಭಾಗದ 588 ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಾಲಿಬಾಲ್, ಕಬ್ಬಡಿ, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಕಿಕ್ ಬಾಕ್ಸಿಂಗ್, ಚೆಸ್, ಕರಾಟೆ, ಟಾಯಿಕ್ವಾಂಡೊ ಮುಂತಾದ ಕ್ರೀಡಾ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಸಂಸ್ಥೆಗೆ ತಂದು ಕೊಟ್ಟಿರುತ್ತಾರೆ. ಇದರ ಜೊತೆಗೆ ಸಂಸ್ಥೆಯ 29 ವಿದ್ಯಾರ್ಥಿಗಳು ಕ್ರೇಂದ್ರ ಸರ್ಕಾರದ ಎಸ್‌ಜಿಎಫ್‌ಐಗೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಈ ಹಿನ್ನಲೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅವರು ಹಾಕಿ ಮಾಂತ್ರಿಕ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೆ 3 ಬಾರಿ ವಿಶ್ವ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತಂದು ಕೊಟ್ಟಿರುವ ಮೇಜರ್ ಧ್ಯಾನ ಚಂದ್ ಅವರ ಹೆಸರಿನಲ್ಲಿ ಈ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟರಿಂದ ಲೋಕಾರ್ಪಣೆಗೊಳಿಸಿರುವುದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿಯೂ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಸಬೇಕೆಂಬುದು ಇವರ ಉದ್ದೇಶವಾಗಿದೆ.
ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ವಿಶ್ವ ಹಿಂದೂ ಪರಿಷತ್ ಮಂಗಳೂರು ಅಧ್ಯಕ್ಷರಾದ ಹೆಚ್.ಕೆ. ಪುರುಷೋತ್ತಮ, ವಕೀಲರಾದ ಪುರುಷೋತ್ತಮ ಭಟ್ ಮತ್ತು ಮಹೇಶ್ ಜೋಗಿ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್ ಉಪಸ್ಥಿತರಿದ್ದರು.
ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿ, ವಂದಿಸಿದರು.