
ವಿಚಾರಣಾಧೀನ ಸಿಬ್ಬಂದಿಗಳಿಗೆ ಕೈದಿಗಳಿಂದ ಹಲ್ಲೆ
ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ತಪಾಸಣೆಗೆ ಮುಂದಾದ ಸಿಬ್ಬಂದಿಗಳಿಗೆ ವಿಚಾರಣಾಧೀನ ಕೈದಿಗಳು ಕೈಯಿಂದ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದ್ದು ಜೈಲು ಸಿಬಂದಿ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.
ಜೈಲಿನ ಸೆಲ್‌ಗಳಲ್ಲಿ ನಿಷೇಧಿತ ವಸ್ತುಗಳಿರುವ ಶಂಕೆಯಲ್ಲಿ ಸೋಮವಾರ ರಾತ್ರಿ ಸಿಬ್ಬಂದಿ ತಪಾಸಣೆಗೆ ತೆರಳಿದ್ದರು. ಈ ವೇಳೆ, ಎ ಬ್ಲಾಕ್ ನಲ್ಲಿರುವ ವಿಚಾರಣಾಧೀನ ಕೈದಿಗಳು ಸಿಬಂದಿಗೆ ಒಳಗೆ ಬರದಂತೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಮಂಗಳೂರು ಜೈಲಿನಲ್ಲಿ ಎ ಮತ್ತು ಬಿ ಬ್ಲಾಕ್ ಎಂದು ಹಿಂದು- ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ಇದೆ. ಎ ಬ್ಲಾಕ್ ನಲ್ಲಿ ಮುಸ್ಲಿಂ ಕೈದಿಗಳನ್ನು ತುಂಬಲಾಗಿದೆ. ಅದರೊಳಗೆ ತಪಾಸಣೆಗೆ ತೆರಳಿದ್ದಾಗ ಹಲ್ಲೆ ಯತ್ನ ಆಗಿದೆ. ಆನಂತರ, ಸಿಬಂದಿ ಸೆಲ್ ಒಳಗಡೆ ಹೋಗದೆ ಹಿಂದಕ್ಕೆ ಬಂದಿದ್ದಾರೆ. ರಾತ್ರಿ 7.30ಕ್ಕೆ ಎಂದಿನಂತೆ ಊಟ ಪೂರೈಕೆ ಮಾಡಿದ ಬಳಿಕ ಸೆಲ್ ಒಳಗೆ ತಪಾಸಣೆ ನಡೆಸಲು ಸಿಬಂದಿ ಮುಂದಾಗಿದ್ದರು.
ಜೈಲು ಸೆಲ್ ನಲ್ಲಿ ಮೊಬೈಲ್, ಗಾಂಜಾ ಇನ್ನಿತರ ನಿಷೇಧಿತ ಮಾದಕ ದ್ರವ್ಯಗಳಿರುವ ಶಂಕೆಯಲ್ಲಿ ಜೈಲು ಅಧೀಕ್ಷಕ ಎಂ.ಎಚ್. ಅಶೇಖಾನ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿತ್ತು. ಆದರೆ ಎ ಬ್ಲಾಕ್ ಕೈದಿಗಳು ತಮ್ಮಲ್ಲಿದ್ದ ಪಾತ್ರೆ ಇನ್ನಿತರ ವಸ್ತುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಎ ಬ್ಲಾಕ್ ನಲ್ಲಿರುವ ಎಲ್ಲ ಕೈದಿಗಳ ಹೆಸರನ್ನೂ ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ.