
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ
Monday, January 27, 2025
ಮೂಡುಬಿದಿರೆ: ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ವಿಕಲಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ದ.ಕ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳ ಕಛೇರಿ, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವು ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಹಿರಿಯ ನಾಗರಿಕರು ಮತ್ತು ಆಡಳಿತ ವೈದ್ಯಾಧಿಕಾರಿ ಜತೆಗೂಡಿ ಶಿಬಿರಕ್ಕೆ ಚಾಲನೆಯನ್ನು ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಅಕ್ಷತಾ ನಾಯಕ್ ಮಾತನಾಡಿ, ಕಣ್ಣಿನ ಪೊರೆ ಎಂಬುದು ರೋಗವಲ್ಲ. ವಯಸ್ಸಾದಂತೆ ಹಿರಿಯ ನಾಗರಿಕರಲ್ಲಿ ಇರುವಂತದ್ದು, ಅವಶ್ಯಕತೆ ಇರುವವರಿಗೆ ಮುಂದಿನ ತಿಂಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿ ಹಾಗೂ ವೆನ್ಲಾಕ್‌ನ ನುರಿತ ವೈದ್ಯರಿಂದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದ ಅವರು ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮೂಡುಬಿದಿರೆ ಹಾಗೂ ಕಲ್ಲಮುಂಡ್ಕೂರು ವಲಯದ ಐ.ಸಿ.ಡಿ.ಎಸ್‌ನ ಮೇಲ್ವಿಚಾರಕಿ ಶುಭ, ಪಲ್ಲವಿ ಉಪಸ್ಥಿತರಿದ್ದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ ಕಾರ್ಯಕ್ರಮ ನಿರ್ವಹಿಸಿದರು.