
ಸೂಪರ್ ಬಜಾರ್‌ಗೆ ಕಳ್ಳರ ಲಗ್ಗೆ ನಗದು ದೋಚಿ ಪರಾರಿ
ಬಂಟ್ವಾಳ: ಸೂಪರ್ ಬಜಾರ್ ಒಂದರ ಶಟರ್ ಬೀಗ ಮುರಿದು ಸಾವಿರಾರು ರೂ. ನಗದು ಕಳವುಗೈದ ಘಟನೆ ಕಲ್ಲಡ್ಕ ಪೇಟೆಯಲ್ಲಿ ನಡೆದಿದೆ.
ತೊಕೊಟ್ಟುವಿನ ಕಲ್ಲಾಪು ನಿವಾಸಿ ಅನ್ಸಾರ್ ಎಂಬವರಿಗೆ ಸೇರಿದ ಕಲ್ಕಡ್ಕ ಸೂಪರ್ ಬಜಾರ್‌ನ ಶಟರ್‌ನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು ಡ್ರಾಯರ್ ನಲ್ಲಿರಿಸಿದ್ದ 58 ಸಾ.ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂದರ್ಭ ಅಂಗಡಿಯಲ್ಲಿದ್ದ ಸಾಮಾಗ್ರಿಗಳನ್ನು ಕೂಡ ಕಳ್ಳರು ಚೆಲ್ಲಾಪಿಲ್ಲಿ ಮಾಡಿದ್ದಾರೆಂದು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಲ್ಲಡ್ಕ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದ್ದು, ಈ ರಸ್ತೆಯಲ್ಲಿ ಹಗಲು ರಾತ್ರಿಯೆನ್ನದೆ ವಾಹನಗಳ ಸಂಚರಿಸುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲೂ ಕಳ್ಳರು ಅಂಗಡಿಯೊಳಗೆ ನುಗ್ಗಿ ತಮ್ಮ ಕೈಚಳಕ ತೋರಿರುವುದು ಇಲ್ಲಿನ ವರ್ತಕರಲ್ಲಿ ಆತಂಕವನ್ನುಂಟು ಮಾಡಿದೆ.
ಮೂರು ತಿಂಗಳ ಹಿಂದೆ ಕಲ್ಲಡ್ಕದ ಪ್ರಸಿದ್ಧ ಕೆ.ಟಿ. ಹೋಟೆಲ್‌ನಲ್ಲಿ ಕಳವು ಕೃತ್ಯನಡೆದಿದ್ದು, ಈ ದೃಶ್ಯ ಇಲ್ಲಿನ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಕಲ್ಲಡ್ಕ ದಲ್ಲಿ ಸೂಪರ್ ಬಜಾರ್‌ನಲ್ಲಿ ಕಳವು ಕೃತ್ಯನಡೆದಿದೆ.
ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.