
ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸೂರ್ಯ ನಮಸ್ಕಾರದೊಂದಿಗೆ ರಥ ಸಪ್ತಮಿ ಆಚರಣೆ
Wednesday, February 5, 2025
ಮಂಗಳೂರು: ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಮಂಗಳವಾರದಂದು ಕ್ರೀಡಾ ಭಾರತಿ ಮಂಗಳೂರು ಇದರ ಸಹಯೋಗದಲ್ಲಿ ಸಾಮೂಹಿಕವಾಗಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ರಥ ಸಪ್ತಮಿಯನ್ನು ಆಚರಿಸಲಾಯಿತು.
ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಕ್ರೀಡಾ ಭಾರತಿ ಮಂಗಳೂರು ಇದರ ಅಧ್ಯಕ್ಷ ಕರಿಯಪ್ಪ ರೈ ಅವರು, ನಾವು ಪ್ರತಿದಿನ ದೇವರನ್ನು ಪೂಜಿಸುತ್ತೇವೆ. ಹಾಗೆಯೇ ಸೂರ್ಯನನ್ನು ಪೂಜಿಸುತ್ತೇವೆ. ಆದರೆ ಇಂದು ಬಹಳ ವಿಶೇಷವಾದ ರಥಸಪ್ತಮಿಯ ದಿನವಾದ್ದರಿಂದ ನಾವೆಲ್ಲ ಸೂರ್ಯನಮಸ್ಕಾರವನ್ನು ಮಾಡುವ ಮೂಲಕ ಸೂರ್ಯನನ್ನು ವಿಶೇಷವಾಗಿ ಪ್ರಾರ್ಥಿಸುತ್ತೇವೆ. ದೀಪದಲ್ಲಿರುವ ಬೆಳಕು ಸೂರ್ಯನಿಂದ ಬಂದದ್ದು, ಸೂರ್ಯನಿಲ್ಲದೆ ಬೆಳಕಿಲ್ಲ. ಹಾಗಾಗಿ ಕ್ರೀಡಾ ಭಾರತಿ ಸಹಯೋಗದಲ್ಲಿ ಮಂಗಳೂರಿನ ಒಟ್ಟು ೫೬ ಕೇಂದ್ರಗಳಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ರಥಸಪ್ತಮಿ ಆಚರಣೆ ನಡೆಯುತ್ತಾ ಇದೆ. ಮಕ್ಕಳನ್ನು ಈ ಭಾರತದ ಶ್ರೇಷ್ಠ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು ಹೇಳುತ್ತಾ ರಥ ಸಪ್ತಮಿಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಅವರು, ಪ್ರತಿವರ್ಷದಂತೆ ಈ ವರ್ಷ ಕೂಡಾ ಕ್ರೀಡಾ ಭಾರತಿಯ ಸಹಯೋಗದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ರಥಸಪ್ತಮಿ ಆಚರಣೆ ನಡೆಯಿತು. ಜಗತ್ತು ಬೆಳಗುತ್ತದೆ ಅಂದರೆ ಅದಕ್ಕೆ ಸೂರ್ಯ ದೇವನೇ ಕಾರಣ. ಈ ದಿನದಂದು ನಾವು ಸೂರ್ಯನಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾ ಪ್ರಾರ್ಥಿಸುವುದು ಹಿಂದೂ ಪಂಚಾಂಗದಲ್ಲಿ ಸನಾತನಕಾಲದಿಂದಲೂ ಆಚರಣೆಯಾಗಿ ಬಂದಿದೆ. ರಥಸಪ್ತಮಿಯ ದಿನದಂದು ಸೂರ್ಯ ಸಪ್ತ ಕುದುರೆಗಳ ರಥದ ಮೇಲೆ ಉತ್ತರದ ಕಡೆ ಸಾಗುತ್ತಾನೆ. ಇಲ್ಲಿಂದ ಬೆಳಕಿನ ಪ್ರಖರತೆ ಹೆಚ್ಚಾಗುತ್ತಾ ಸಾಗುತ್ತದೆ. ಇದರಿಂದ ನಮಗೆ ಸಕಲ ಆರೋಗ್ಯ ಭಾಗ್ಯ ಲಭಿಸಲಿ ಎಂಬ ಉದ್ದೇಶಕ್ಕಾಗಿ ಇಂದು ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯನ್ನು ಪ್ರಾರ್ಥಿಸಲಾಗುತ್ತದೆ. ನಾವೆಲ್ಲಾ ದಿನನಿತ್ಯ ಜೀವನದಲ್ಲಿ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡುವ ಮೂಲಕ ಈ ರಥ ಸಪ್ತಮಿಯನ್ನು ಆಚರಿಸೋಣ ಎಂದು ಶುಭ ಹಾರೈಸಿದರು.
ನಂತರ ದೇಲಂಪಾಡಿ ಯೋಗಾ ಪ್ರತಿಷ್ಟಾನದ ಸದಸ್ಯರು ಮತ್ತು ಯೋಗ ತರಬೇತುದಾರರಾದ ಸುಭದ್ರಾ ಮತ್ತು ವೀಣಾ ಮಾರ್ಲಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕವಾಗಿ ಸೂರ್ಯ ನಮಸ್ಕಾರವನ್ನು ಮಾಡಿದರು.
ಈ ಸಂದರ್ಭದಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್, ಕ್ರೀಡಾ ಭಾರತಿ ಮಂಗಳೂರು ಇದರ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು ಮತ್ತಿತರು ಉಪಸ್ಥಿತರಿದ್ದರು.
ಶಿಕ್ಷಕ ಶರಣಪ್ಪ ನಿರೂಪಿಸಿ, ವಂದಿಸಿದರು.