ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್ ತಯಾರಿಸಲು ಸರ್ಕಾರದ ಅನುಮೋದನೆ

ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್ ತಯಾರಿಸಲು ಸರ್ಕಾರದ ಅನುಮೋದನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವುದಕ್ಕೆ ಇದೀಗ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಳೆದ ವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಖುದ್ದು ಮನವಿ ಮಾಡಿದ್ದರು. ಈ ಮನವಿಗೆ ತುರ್ತು ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ 71.60 ಕಿಮೀ. ದೂರದ ರಸ್ತೆ ಅಗಲೀಕರಣಕ್ಕೆ ಡಿಪಿಆರ್ ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕಗೊಳಿಸುವುದಕ್ಕೆ ಅನುಮತಿ ನೀಡಿದೆ. ಜತೆಗೆ ಇದಕ್ಕೆ ತಗಲುವ ವೆಚ್ಚವಾದ 3.19 ಕೋಟಿ ರೂ.ವನ್ನು ಏಜೆನ್ಸಿ ವೆಚ್ಚದಡಿ ಭರಿಸುವುದಕ್ಕೆ ಅನುಮೋದನೆಯನ್ನು ಕೂಡ ನೀಡಿ ಆದೇಶ ಹೊರಡಿಸಿದೆ. ಹೀಗಿರುವಾಗ, ಶೀಘ್ರದಲ್ಲೇ ಮಾಣಿ-ಸಂಪಾಜೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸುವುದಕ್ಕೆ ಏಜೆನ್ಸಿ ಆಯ್ಕೆ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯಲಿದೆ.

ಲೋಕೋಪಯೋಗಿ ಇಲಾಖೆಯ ತುರ್ತು ಸ್ಪಂದನೆಯನ್ನು ಶ್ಲಾಘಿಸಿರುವ ಸಂಸದ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬಿ.ಸಿ. ರೋಡ್-ಅಡ್ಡಹೊಳೆ, ಪುಂಜಾಲಕಟ್ಟೆ-ಚಾರ್ಮಾಡಿ ಸೇರಿ ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಜಿಲ್ಲೆಯ ಮತ್ತೊಂದು ಹೆದ್ದಾರಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖ್ಯ ಎಂಜಿನಿಯರ್‌ಗೆ ಅನುಮತಿಯನ್ನು ನೀಡಿ ಆದೇಶ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡವನ್ನು ಮಡಿಕೇರಿ-ಮೈಸೂರು ಕಡೆಯಿಂದ ಸಂಪರ್ಕಿಸುವಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯು ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ. ಈ ಹೆದ್ದಾರಿ ಅಭಿವೃದ್ಧಿಯಾದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರು ಬಂದರು ಅಥವಾ ಮಂಗಳೂರು ಏರ್‌ಪೋರ್ಟ್‌ನ್ನು ಸಂಪರ್ಕಿಸುವುದಕ್ಕೆ ಮತ್ತಷ್ಟು ಸುಲಭವಾಗಲಿದ್ದು, ಜಿಲ್ಲೆಯ ವಾಣಿಜ್ಯೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆ ಲೋಕೋಪಯೋಗಿ ಇಲಾಖೆಯಿಂದ ಡಿಪಿಆರ್ ತಯಾರಿಕೆಗೆ ಅನುಮತಿ ಲಭಿಸಿರುವುದು ಈ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸುವುದಕ್ಕೆ ಎದುರಾಗಿದ್ದ ಅಡ್ಡಿ ದೂರವಾಗಿದ್ದು, ಆದಷ್ಟು ಬೇಗ ಹೆದ್ದಾರಿ ಇಲಾಖೆಗಳಿಂದ ಮುಂದಿನ ಪ್ರಕ್ರಿಯೆ ಪೂರ್ಣಗೊಂಡು ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಣಿ-ಸಂಪಾಜೆ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಶಾಸಕರುಗಳ ಸಹಕಾರದೊಂದಿಗೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ವಿಶ್ವಾಸವಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

ನೆನೆಗುದಿಗೆ ಬಿದ್ದಿದ್ದ ಪ್ರಸ್ತಾವನೆಗೆ ಮರುಜೀವ:

ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಂಗಳೂರು ವಿಭಾಗದ ವ್ಯಾಪ್ತಿಯ ಉಪವಿಭಾಗದಲ್ಲಿ ಬರುವ ಮಾಣಿ-ಸಂಪಾಜೆ ಹೆದ್ದಾರಿಯನ್ನು ಕೂಡ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಡಿಪಿಆರ್‌ಗೆ ಸಂಬಂಧಿಸಿದಂತೆ 2022ರಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯು ನಾನಾ ಕಾರಣಗಳಿಂದ ನೆನೆಗುದ್ದಿಗೆ ಬಿದ್ದಿತ್ತು. ಅಲ್ಲದೇ ಹಿಂದಿನ ಪ್ರಸ್ತಾವನೆಯಲ್ಲಿ ಯಾವುದೇ ಪ್ರಗತಿಯನ್ನು ಕಾಣದ ಕಾರಣ ಹಿಂದಿನದನ್ನು ಹೊರತುಪಡಿಸಿ ಸಂಸದ ಕ್ಯಾ. ಚೌಟ  ಹೆಚ್ಚಿನ ಮುತುವರ್ಜಿ ವಹಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಇದೇ ವರುಷದ ಜನವರಿ ತಿಂಗಳಿನಲ್ಲಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅಲ್ಲದೆ, ಇತ್ತೀಚೆಗೆ ಲೋಕೋಪಯೋಗಿ ಸಚಿವರು ಜಿಲ್ಲೆಗೆ ಬಂದ ವೇಳೆ ಆದಷ್ಟು ಬೇಗ ಡಿಪಿಆರ್‌ಗೆ ಅನುಮತಿಸಲು ಕ್ರಮ ಜರುಗಿಸುವಂತೆ ಕೋರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article