
ನೇಮೋತ್ಸವಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಬಂಟ್ವಾಳ: ತಾಲೂಕಿನ ಶಂಭೂರು ಗ್ರಾಮದ ಶ್ರೀ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ ಧರ್ಮರಸು ದೈವೊಂಗಳು ಅಲಂಗಾರ ಮಾಡ ಬರ್ಕೆ ಹಾಗೂ ವೈದ್ಯನಾಥ ಜುಮಾದಿ ಬಂಟ ದೈವಸ್ಥಾನ ದಿಂಡಿಕೆರೆ ಜೋಡುಸ್ಥಾನ ನೇಮೋತ್ಸವ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಬಿ.ಸಿ.ರೋಡಿನಲ್ಲಿರುವ ಆಡಳಿತಸೌಧದ ಮುಂಭಾಗದಲ್ಲಿ ಪ್ರತಿಭಟಿಸಿದರು.
ಅನಾದಿ ಕಾಲದಿಂದ ಮೂರು ಕಡೆಯಲ್ಲಿ ವಿಜೃಂಭಣೆಯಿಂದ ನೇಮೋತ್ಸವ ನಡೆಯುತ್ತಿದ್ದು, ಹಿಂದೂ ಧಾರ್ಮಿಕ ದತ್ತಿ ವ್ಯವಸ್ಥಾಪನ ಸಮಿತಿಗೆ ನೇಮೋತ್ಸವ ನಡೆಸಲು ಅವಕಾಶವಿದ್ದರೂ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಹಾಗಾಗಿ ಜಿಲ್ಲಾಧಿಕಾರಿಯವರು, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಥವಾ ತಹಶೀಲ್ದಾರರು ಗ್ರಾಮಸ್ಥರನ್ನು ಸೇರಿಸಿಕೊಂಡು ಸಂಪ್ರದಾಯಬದ್ದವಾಗಿ ನೇಮೋತ್ಸವ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ದೈವಸ್ಥಾನ ಗ್ರಾಮಸ್ಥರಿಗೆ ಭಾವನಾತ್ಮಕ ಸಂಬಂಧವಿದ್ದು, ದೈವಸಾನಿಧ್ಯದ ಧಾರ್ಮಿಕ ಸಂಪ್ರದಾಯದಂತೆ ದೈವದ ನಡೆಯಲ್ಲಿ ಮಕ್ಕಳ ಕಂಚಿಲು ಸೇವೆ ಇನ್ನಿತರ ಸೇವೆಗಳನ್ನು ನೀಡಲು ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ವ್ಯವಸ್ಥಾಪನ ಸಮಿತಿಗೆ ಕಾಯಿದೆಬದ್ದವಾಗಿ ಅಧಿಕಾರವನ್ನು ಬಳಸಿಕೊಳ್ಳಲು ಅವಕಾಶ ನೀಡುವವರೆಗೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ತಾ.ಪಂ. ಮಾಜಿ ಉಪಾಧ್ಯಕ್ಷ ಆನಂದ ಶಂಭೂರು ಮಾತನಾಡಿ, ನೇಮೋತ್ಸವದ ಪ್ರಯುಕ್ತ ಈಗಾಗಲೇ ಗೊನೆ ಕಡಿಯಲಾಗಿದ್ದು, ಅಧಿಕಾರಿಗಳ ತಡೆಯಿಂದ ನೇಮ ಸ್ಥಗಿತವಾಗಿದೆ. ಗ್ರಾಮಸ್ಥರ ನಂಬಿಕೆ, ಸಂಪ್ರದಾಯದಂತೆ ನೇಮೋತ್ಸವದ ಆಚರಣೆಗೆ ಅಧಿಕಾರಿಗಳು ಅವಕಾಶ ನೀಡಬೇಕು ಅಥವಾ ಅಧಿಕಾರಿಗಳು ಮುಂದೆ ನಿಂತು ನೇಮೋತ್ಸವ ನಡೆಸಿಕೊಡಬೇಕು ಎಂದು ಒತ್ತಾಯಿಸಿದರು.
ಕೇಶವ ಬರ್ಕೆ, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ನರಿಕೊಂಬು, ಹೇಮಚಂದ್ರ ಭಂಡಾರದ ಮನೆ, ನವೀನ್ ಕೋಟ್ಯಾನ್, ಗಣೇಶ್ ಪ್ರಸಾದ್ ಜೆ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ನರೇಂದ್ರ ಭಟ್ ಅವರ ಮೂಲಕ ಜಿಲ್ಲಾಧಿಕಾರೊಯವರಿಗೆ ಮನವಿ ಸಲ್ಲಿಸಿದರು. ಬಂಟ್ವಾಳ ನಗರ ಪೊಲೀಸರು ಬಂದೋಬಸ್ತ್ ಏರ್ಪಡಿಸಿದರು.