
ನೆಲ್ಲಿದಡಿಗುತ್ತು: ಪಾದಯಾತ್ರೆ ತಾತ್ಕಾಲಿಕ ಹಿಂತೆಗೆತ
ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝಡ್) ಸುಪರ್ದಿಯಲ್ಲಿ ಇರುವ ಬಜಪೆಯ ಪೇಜಾವರ ಮಾಗಣೆಯ ನೆಲ್ಲಿದಡಿಗುತ್ತು ಕಾಂತೇರಿ ಜುಮಾದಿ ದೈವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸಲು ಮುಕ್ತ ಅವಕಾಶ ಮಾಡಿಕೊಡುವ ಬಗ್ಗೆ ಸೂಕ್ತ ಭರವಸೆ ದೊರೆತಿರುವ ಹಿನ್ನೆಲೆಯಲ್ಲಿ ಮಾ.18ರಂದು ನಡೆಸಲು ಉದ್ದೇಶಿಸಿದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಅದರ ಬದಲು ನೆಲ್ಲಿದಡಿ ಗುತ್ತು ಚಾವಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ನೆಲ್ಲಿದಡಿ ಉಳಿಸಿ ಹೋರಾಟ ಸಮಿತಿ ಪ್ರಕಟಿಸಿದೆ.
ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಎಂಎಸ್‌ಇಝಡ್ ವ್ಯಾಪ್ತಿಯೊಳಗೆ 5.68 ಎಕರೆ ಜಾಗದಲ್ಲಿ ದೈವಸ್ಥಾನ ಇದ್ದು,
ವರ್ಷಂಪ್ರತಿ ಅಧಿಕಾರಿಗಳ ಅನುಮತಿ ಮೇರೆಗೆ ದೈವಾರಾಧನೆ ನಡೆಯುತ್ತಿದೆ. ಈ ಬಾರಿ ಅಧಿಕಾರಿಗಳು ದೈವಾರಾಧನೆಗೆ ಅಡ್ಡಗಾಲು ಹಾಕಿದ ಪರಿಣಾಮ ಹೋರಾಟ ಸಮಿತಿ ರೂಪುಗೊಂಡು
ಪಾದಯಾತ್ರೆಗೆ ಸಿದ್ಧತೆ ನಡೆಸಲಾಗಿದೆ. ಆದರೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿರುವುದರಿಂದ ಪಾದಯಾತ್ರೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದರು.
ಮಾ.8ರಂದು ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಎಂಎಸ್‌ಇಝಡ್ ಹಾಗೂ ಕೆಐಡಿಬಿಎಲ್ ಅಧಿಕಾರಿಗಳು, ನೆಲ್ಲಿದಡಿ ಕುಟುಂಬ, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮೂರು ರೀತಿಯ ಪರಿಹಾರ ಕಂಡುಕೊಂಡು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೆಲ್ಲಿದಡಿ ಗುತ್ತು ಮತ್ತು ದೈವಸ್ಥಾನವನ್ನು ಕೈಗಾರಿಕಾ ವಲಯದಿಂದ ಮುಕ್ತಗೊಳಿಸಬೇಕು. ಅಲ್ಲಿಗೆ ಪ್ರತ್ಯೇಕವಾದ ರಸ್ತೆ ಸಂಪರ್ಕ ಕಲ್ಪಿಸಬೇಕು. ನೆಲ್ಲಿದಡಿ ಗುತ್ತಿಗೆ ಸಂಬಂಧಿಸಿದ 5.68 ಎಕರೆ ಭೂಮಿಯನ್ನು ಸರ್ಕಾರ ಡಿನೋಟಿಫೈ ಮಾಡಿ ದೈವದ ಹೆಸರಿಗೆ ಹಿಂತಿರುಗಿಸಬೇಕು ಎಂಬ ಬೇಡಿಕೆ ಮಂಡಿಸಲಾಗಿದೆ ಎಂದರು.
ಇದನ್ನು ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ಸಮ್ಮತಿಸಿದ್ದು, ಎರಡು ದಿನಗಳಲ್ಲಿ ಈ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ್ದಾರೆ. ರಸ್ತೆ ಸಂಪರ್ಕಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗೆ ವರದಿ ಮಂಡಿಸಲಿದ್ದಾರೆ ಎಂದರು.
ದೈವಸ್ಥಾನ ಸ್ಥಳದ ಡಿನೋಟಿಫೈ ಪೂರ್ತಿಯಾಗುವ ವರೆಗೆ ಹೋರಾಟದ ಕಾವು ಉಳಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಅಭಿಯಾನ ನಡೆಯಲಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಇದ್ದರೆ ಮುಂದೆ ತೀವ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ್ರತಿ ಬಾರಿ ಈ ದೈವಸ್ಥಾನದಲ್ಲಿ ಉತ್ಸವ ಆಚರಿಸಬೇಕಾದರೆ ಎಂಎಸ್‌ಇಝಡ್ ಕೊಚ್ಚಿನ್‌ನಿಂದ ಒಪ್ಪಿಗೆ ಪಡೆಯಬೇಕು. ಅಧಿಕಾರಿಗಳು ಒಪ್ಪಿಗೆ ನೀಡಲು ಸಾಕಷ್ಟು ಸತಾಯಿಸುತ್ತಾರೆ. ಈ ಬಾರಿ ಫೆಬ್ರವರಿಯಲ್ಲಿ ದೈವದ ಸಂಕ್ರಮಣ ಹಾಗೂ ಹೋಮ ಕಜ್ಜಾಯ ಸೇವೆಯನ್ನು ನಡೆಸಲು ಅಧಿಕಾರಿಗಳು ಅಡ್ಡಿಪಡಿದ್ದರು. ಇನ್ನು ಏಪ್ರಿಲ್ನಲ್ಲಿ ಚಾವಡಿ ನೇಮ ನಡೆಯಲಿದ್ದು, ಸುಮಾರು ಒಂದೂವರೆ ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ ಎಂದರು. ಚಾವಡಿ ಪ್ರಮುಖ ಲಕ್ಷ್ಮಣ ಚೌಟ, ಮುಖಂಡರಾದ ಅಶ್ವಿನ್, ಶರತ್ ಉಪಸ್ಥಿತರಿದ್ದರು.