
ಪೇಪರ್ ಪೆನ್ ತಯಾರಿ ಕಾರ್ಯಾಗಾರ
ಮಂಗಳೂರು: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪರಿಸರ ಕಾಳಜಿಯ ಕಾರ್ಯಕ್ರಮದ ಅಂಗವಾಗಿ ಆಹಾರ, ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಪೇಪರ್ ಪೆನ್ ತಯಾರಿ ತರಬೇತಿ ಕಾರ್ಯಾಗಾರದ ನೂರನೇ ಸಂಭ್ರಮ ಕಾರ್ಯಕ್ರಮ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಾ.೪ರಂದು ಮಧ್ಯಾಹ್ನ 1.30ರಿಂದ 3.30ರವರೆಗೆ ನಡೆಯಲಿದೆ ಎಂದು ಸಂಘಟಕ ಜಯಪ್ರಕಾಶ್ ಎಕ್ಕೂರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿ.ವಿ.ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ, ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಡಾ. ಸುರೇಶ್ ಮತ್ತು ಡಾ.ಗಾಯತ್ರಿ.ಎನ್.ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಆಹಾರ, ಪರಿಸರ ಮತ್ತು ಆಲೋಚನೆ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಆಹಾರ ಪದ್ದತಿ ಬದಲಾಗುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಪೇಪರ್ ಪೆನ್ ತಯಾರಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್ ಬಳಕೆಗೆ ಕೊಂಚ ಮಟ್ಟಿಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು. ಈಗಾಗಲೇ 99 ಶಾಲೆಗಳಲ್ಲಿ ಪರಿಸರ ಸ್ನೇಹಿ ಪೇಪರ್ ಪೆನ್ ತಯಾರಿ ತರಬೇತಿ ಕಾರ್ಯಾಗಾರ ನಡೆಸಲಾಗಿದ್ದು, ನೂರನೇ ಕಾರ್ಯಕ್ರಮವನ್ನು ವಿ.ವಿ.ಕಾಲೇಜಿನಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉಪನ್ಯಾಸಕ ಶ್ರೀಕೃಷ್ಣ, ಜಾನ್ಸ್ ಡಿಸೋಜಾ, ಆಶ್ನಾ ಎಲಿಜಬೆತ್ ಉಪಸ್ಥಿತರಿದ್ದರು.