
‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’
Thursday, March 13, 2025
ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ದಕ್ಷಿಣ ವಲಯದ ಮುಂದಾಳತ್ವದಲ್ಲಿ ಮಂಗಳೂರು ದಕ್ಷಿಣ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಧರ್ಮಭಗಿನಿಯರು, ಪಾಲನಾ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳು, ಕಥೊಲಿಕ್ ವಿದ್ಯಾಸಂಸ್ಥೆಗಳು ಹಾಗೂ 21 ಆಯೋಗದ ಸಹಭಾಗಿತ್ವದಲ್ಲಿ ತಪಸ್ಸು ಕಾಲದ ಆಧ್ಯಾತ್ಮಿಕ ಪ್ರೇರಣೆಯಾಗಿ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಕಾಲ್ನಡಿಗೆ ಜಾಥ ಮಾ.16 ರಂದು ನಡೆಯಲಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಕೋಟೆಕಾರು ಗ್ರಾಮದ ದಯಾಮಾತಾ ಚರ್ಚ್ ಪಾನೀರ್ನಿಂದ ಜಾಥಾ ಆರಂಭಗೊಳ್ಳಲಿದ್ದು, ದೇರಳಕಟ್ಟೆ, ನಾಟೆಕಲ್ ಮಾರ್ಗವಾಗಿ ಮುಡಿಪು ಸಂತ ಜೋಸೆಫ್ ವಾಜ್ ಅವರ ಪುಣ್ಯಕ್ಷೇತ್ರದಲ್ಲಿ ಕೊನೆಗೊಳ್ಳಲಿದೆ ಎಂದು ದಕ್ಷಿಣ ವಲಯದ ಸಂಚಾಲಕ ಆಲ್ವಿನ್ ಡಿಸೋಜ ಪಾನೀರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಂ. ಫಾ. ವಿಕ್ಟರ್ ಡಿಮೆಲ್ಲೊ ಉದ್ಘಾಟಿಸಲಿದ್ದಾರೆ. ವಿಶ್ರಾಂತ ಬಿಷಪ್ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಅ.ವಂ. ಫಾ. ಅಸ್ಸಿಸಿ ರೆಬೆಲ್ಲೊ ಮತ್ತು ಫಾ. ಸಂತೋಷ್ ಮಿನೇಜಸ್ ಪ್ರಾರ್ಥನೆ ನೆರವೇರಿಸುವರು. ಅ.ವಂ. ಸಿಪ್ರಿಯನ್ ಪಿಂಟೊ ಪರಮಪ್ರಸಾದದ ಆಶೀರ್ವಚನ ನೆರವೇರಿಸುವರು. ಜಾಥದಲ್ಲಿ 6000 ಮಂದಿ ಭಾಗವಹಿಸುವರು ಎಂದರು.
ಮಂಗಳೂರು ದಕ್ಷಿಣ ವಲಯದ ಕಥೊಲಿಕ್ ಸಭಾದ ಅಧ್ಯಕ್ಷ ಡೋಲಿ ಡಿಸೋಜ, ಘಟಕದ ಅಧ್ಯಕ್ಷ ರಜತ್ ವೇಗಸ್, ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.