
ನಾಳೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶ ಪರೀಕ್ಷೆ: ಒಟ್ಟು 20,134 ಅರ್ಜಿಗಳ ಸಲ್ಲಿಕೆ
Saturday, March 1, 2025
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿರುವ ಕರ್ನಾಟಕದ ನಂ.1 ಕನ್ನಡ ಮಾಧ್ಯಮ ಶಾಲೆ-ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶ ಪರೀಕ್ಷೆಯು ಮಾರ್ಚ್ 2ರಂದು ವಿದ್ಯಾಗಿರಿ ಹಾಗೂ ಪುತ್ತಿಗೆ ಶಾಲಾ ಆವರಣದಲ್ಲಿ ನಡೆಯಲಿದೆ.
ಈವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 20,134 ಅರ್ಜಿಗಳು ಸ್ವೀಕೃತವಾಗಿದ್ದು, ವಿದ್ಯಾರ್ಥಿಗಳು 2.30 ಘಂಟೆಗಳ 150 ಅಂಕದ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು 6ನೇ ತರಗತಿಯಿಂದ 10ನೇ ತರಗತಿ ವರೆಗಿನ ಶಿಕ್ಷಣವನ್ನು ಉಚಿತವಾಗಿ ಊಟ, ವಸತಿ ಹಾಗೂ ಇನ್ನಿತರ ಸೌಲಭ್ಯಗಳೊಂದಿಗೆ ಪಡೆಯಬಹುದಾಗಿದೆ.
ಈ ಬಾರಿಯ ಪರೀಕ್ಷೆ ಆಳ್ವಾಸ್‌ನ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿರುವ ಯಶೋಕಿರಣ ಬ್ಲಾಕ್, ಜಗನ್ಮೋಹನ, ಕಾಮಾರ್ಸ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಹೀಗೆ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸರಕಾರದ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಅಥವಾ ಶಾಲೆಗಳನ್ನು ವಿಲೀನಗೊಳಿಸುವ ಪರಿಸ್ಥಿತಿಯಲ್ಲಿರುವ ಕಾಲ ಘಟ್ಟದಲ್ಲಿ, ಪ್ರೈವೇಟ್ ಚಿಂತನೆಯಲ್ಲಿ ಮೂಡಿಬಂದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಸ್ವೀಕೃತಗೊಂಡಿರುವ ಅರ್ಜಿಯನ್ನು ಗಮನಿಸಿದರೆ, ಈ ಕಾಲಕ್ಕನುಗುಣವಾದ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ, ಖಂಡಿತ ವಿದ್ಯಾರ್ಥಿಗಳ ಕೊರತೆ ಎದುರಾಗದು ಎಂಬುದನ್ನು ಆಳ್ವಾಸ್ ಸಾಬೀತುಪಡಿಸಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು.