ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು: ಡಾ. ಕೆ. ವಿದ್ಯಾಕುಮಾರಿ

ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು: ಡಾ. ಕೆ. ವಿದ್ಯಾಕುಮಾರಿ

 ಜನಪದ ಉತ್ಸವ  ಜನ ಜಲ್ಸಾ-2025


ಉಡುಪಿ: ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು. ವೈವಿಧ್ಯಮಯ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ನಮ್ಮ ನಾಡಿನ ಹಿರಿಮೆಯನ್ನು ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಅದನ್ನು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾನ್ಯ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಭಿಪ್ರಾಯ ಪಟ್ಟರು.


ಇವರು ಉಡುಪಿ ಜಿಲ್ಲೆಯ ಲೀಡ್ ಕಾಲೇಜು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕೃತಿಕ ವೇದಿಕೆ ಇದರ ಸಂಯುಕ್ತ  ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಜನಪದ ಉತ್ಸವ “ಜನ ಜಲ್ಸಾ 2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


ಮಹಿಳೆಯರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾದದ್ದು ಎಂದರು.


ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಮಾನ್ಯ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಉತ್ತಮ ಗುರಿಯನ್ನು ಹೊಂದಿರಬೇಕು. ಗುರಿ ಉತ್ತಮವಾಗಬೇಕಾದರೆ ಉತ್ತಮ ಸಂಸ್ಕೃತಿಯನ್ನು ಹೊಂದಿರಬೇಕು. ಗುರು ಹಿರಿಯನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಉಟ್ಟು ಜನಪದ ಉತ್ಸವದಲ್ಲಿ ಪಾಲ್ಗೊಂಡರು. ಕಾಲೇಜು ವಿದ್ಯಾರ್ಥಿಗಳು ತಮ್ಮ ತರಗತಿ ಕೊಠಡಿಗಳಲ್ಲಿ ಜನಪದ ವಸ್ತುಗಳನ್ನು ಇಟ್ಟು ಅಲಂಕರಿಸಿದ್ದರು ಹಾಗು ಸಾಂಪ್ರದಾಯಿಕ ರುಚಿಕರ ತಿಂಡಿ ತಿನಸುಗಳನ್ನು ತಯಾರಿಸಿ ಮಾರಾಟವನ್ನು ಮಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಪ್ರಸಾದ್ ಕೆ ವಹಿಸಿದ್ದರು. 

ಸಾಫಲ್ಯ ಟ್ರಸ್ಟ್ ನ ನಿರ್ದೇಶಕಿ ನಿರುಪಮಾ ಪ್ರಸಾದ್, ಖ್ಯಾತ ಬರಹಗಾರರು ವಸಂತಿ ಶೆಟ್ಟಿ ಬ್ರಹ್ಮವಾರ, ಕಾಲೇಜಿನ ಐಕ್ಯೂಎಸಿ ಸಂಚಾಲಕರು ಪ್ರೊ. ಶ್ರೀಮತಿ ಅಡಿಗ ಮತ್ತು ವಾಣಿಜ್ಯ ನಿಕಾಯದ ಡೀನ್ ಗೌರಿ ಎಸ್. ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕರು ಹಾಗೂ ಕಲಾ ನಿಕಾಯದ ಡೀನ್ ಆಗಿರುವ ಪ್ರೊ. ನಿಕೇತನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ. ಕೆ ನಿರೂಪಿಸಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾ ಎಸ್.ಎನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article