ರೋಸ್ಟೆಡ್ ಸುಪಾರಿ ಆಮದು ತಡೆಗೆ ಕೇಂದ್ರದ ಕ್ರಮ: ಕ್ಯಾಂಪ್ಕೊ ಶ್ಲಾಘನೆ

ರೋಸ್ಟೆಡ್ ಸುಪಾರಿ ಆಮದು ತಡೆಗೆ ಕೇಂದ್ರದ ಕ್ರಮ: ಕ್ಯಾಂಪ್ಕೊ ಶ್ಲಾಘನೆ


ಮಂಗಳೂರು: ವಿದೇಶಿ ವ್ಯಾಪಾರ ನಿರ್ದೇಶನಾಲಯದ ಐಟಿಸಿ (ಹೆಚ್.ಎಸ್) ಕೋಡ್ 20081920 ಅಡಿಯಲ್ಲಿ ಪರಿಗಣಿತವಾಗಿದ್ದ ಹುರಿದ ಅಡಿಕೆಯ ಅನಿರ್ಬಂಧಿತ ವ್ಯಾಪಾರವನ್ನು ರದ್ದುಗೊಳಿಸಿದೆ. ಈ ಮೂಲಕ ‘ರೋಸ್ಟೆಡ್ ನಟ್ಸ್ ಮತ್ತು ಸೀಡ್ಸ್’ ಶಿರೋನಾಮೆಯ ಮೂಲಕ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧ ಹೇರಲಾಗಿದೆ. ಕೇಂದ್ರ ಸರಕಾರದ ಈ ಕ್ರಮಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಏ.2 ರಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಐಟಿಸಿ (ಎಚ್‌ಎಸ್) ಕೋಡ್ 08028090 ಮತ್ತು 20081920 ಅಡಿಯಲ್ಲಿ ಬರುವ ‘ಹುರಿದ ಅಡಿಕೆ’ಯನ್ನು ‘ಉಚಿತ’ದಿಂದ ‘ನಿಷೇಧಿತ’ ಎಂದು ಪರಿಷ್ಕರಿಸಿ ವರ್ಗೀಕರಿಸಲಾಗಿದೆ. ಆದಾಗಿಯೂ, ಕನಿಷ್ಠ ಆಮದು ದರವನ್ನು ಪ್ರತೀ ಕೆಜಿಗೆ 351 ರೂ. ನಿಗದಿ ಪಡಿಸಿದ್ದು, ಆಮದು ಮಾಡಲ್ಪಡುವ ಅಡಿಕೆಯ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ಮೌಲ್ಯವು ಪ್ರತಿ ಕಿಲೋಗ್ರಾಂಗೆ 351 ರೂ. ಮತ್ತು ಅದಕ್ಕಿಂತ ಹೆಚ್ಚಿದ್ದರೆ, ಶೇ.100 ರಫ್ತು ಆಧಾರಿತ ಘಟಕಗಳು, ಎಸ್‌ಇಝೆಡ್‌ನಲ್ಲಿರುವ ಘಟಕಗಳು ಮತ್ತು ಮುಂಗಡ ಅಧಿಕಾರ ಯೋಜನೆಯಡಿಯಲ್ಲಿ ಆಮದು ಮಾಡಿಕೊಳ್ಳುವ ಅಡಿಕೆಗೆ ಎಂಐಪಿ ಷರತ್ತುಗಳು ಅನ್ವಯವಾಗುವುದಿಲ್ಲ.

ಈ ಸಂಖ್ಯೆಯಡಿಯಲ್ಲಿ ಎಲ್ಲಾ ರೀತಿಯ ಸಂಸ್ಕರಿತ ಅಡಿಕೆಯನ್ನು ಸೇರಿಸಲಾಗಿದ್ದು, ಈಗ ಹುರಿದ ಅಡಿಕೆಯು ಸಹ ಸೇರ್ಪಡೆಗೊಂಡಿದೆ. ಕೆಲವು ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಬಂದಿದ್ದರ ಪರಿಣಾಮ ಪಟೋರ ಮತ್ತಿತರ ಕೆಳದರ್ಜೆಯ ಅಡಿಕೆಯ ದರ ಕಡಿಮೆಯಾಗಿರುವುದಲ್ಲದೇ ಬೇಡಿಕೆ ಕುಂಠಿತವಾಗಿದ್ದನ್ನು ಗನನಿಸಬಹುದಾಗಿದೆ. ಕೇಂದ್ರ ಸರಕಾರದ ಕ್ರಮದಿಂದ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article