ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ: ವಿನೂತನ ಶೈಲಿಯ ಚಿಕಿತ್ಸೆಯಿಂದ ವಯಸ್ಸಾದ ಹೃದ್ರೋಗಿಗೆ ಜೀವದಾನ

ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ: ವಿನೂತನ ಶೈಲಿಯ ಚಿಕಿತ್ಸೆಯಿಂದ ವಯಸ್ಸಾದ ಹೃದ್ರೋಗಿಗೆ ಜೀವದಾನ


ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡವು ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯ ಮೂಲಕ ಜೀವದಾನ ನೀಡಿದ್ದಾರೆ.

ವೈದ್ಯರು ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮತ್ತು ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೊನ್ನಾವರ ಮೂಲದ 69 ವಯಸ್ಸಿನ ಹೃದ್ರೋಗಿ ತೀವ್ರ ಎದೆನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗಶಾಸ್ತ್ರ ತಜ್ಞ ಡಾ. ಪ್ರಭಾಕರ್ ಅವರನ್ನು ಭೇಟಿ ಮಾಡಿ ತಮ್ಮ ಹೃದ್ರೋಗದ ಸಮಸ್ಯೆಗಳನ್ನು ವಿವರಿಸಿದರು. ರೋಗಿಯನ್ನು ವೈದ್ಯರು ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ ರೋಗಿಯು ತೀವ್ರ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದು, ಹೃದಯದ ಅಪದಮನಿಯಲ್ಲಿ ಕ್ಯಾಲ್ಸಿಯಂ ಕಣಗಳಿದ್ದು, ರಕ್ತದ ಚಲನವಲನಕ್ಕೆ ಅಡ್ಡಿ ಮಾಡುತ್ತಿತ್ತು. ರೋಗಿಯು 10 ವರ್ಷದ ಹಿಂದೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಕಾರಣದಿಂದ ಎರಡನೇ ಬೈಪಾಸ್ ಶಸ್ತ್ರಚಿಕಿತ್ಸೆಯು ರೋಗಿಯ ಜೀವಕ್ಕೆ ಗಂಭೀರ ಸಮಸ್ಯೆ ಮತ್ತು ಅಪಾಯಕಾರಿಯಾಗಿತ್ತು. ತಕ್ಷಣ ರೋಗಿಯನ್ನು ಆಸ್ಪತ್ರಗೆ ದಾಖಲಿಸಿ ಡಾ. ಪ್ರಭಾಕರ್ ಅವರು ಈ ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿ, ಒಂದೂವರೆ ಗಂಟೆ ಅವಧಿಯ ಕ್ಲಿಷ್ಟಕರವಾದ ಅರ್ಬಿಟಲ್ ಅಥೆರೆಕ್ಟೆಮಿ ಚಿಕಿತ್ಸೆಯನ್ನು ನಿರ್ವಹಿಸಿ ಹೃದಯದಲ್ಲಿರುವ ಕ್ಯಾಲ್ಸಿಯಂ ಕಣಗಳನ್ನು ನಿರ್ಮೂಲನೆಗೊಳಿಸಿ, ಎರಡು ಸ್ಟೆಂಟ್‌ಗಳನ್ನು ಅಳವಡಿಸಿ ಸಾಮಾನ್ಯ ರಕ್ತ ಚಲನೆಗೆ ಅನುವುಮಾಡಿಕೊಟ್ಟರು.

ಈ ಅಪಾಯಕಾರಿ ಮತ್ತು ಕಠಿಣ ಚಿಕಿತ್ಸೆಯನ್ನು ಸೂಕ್ತ ಮುಂಜಾಗ್ರತೆಗಳನ್ನು ಅನುಸರಿಸಿ ನಿರ್ವಹಿಸಲಾಗಿದೆ ಎಂದು ಡಾ. ಪ್ರಭಾಕರ್ ಮಾಹಿತಿ ನೀಡಿದ್ದಾರೆ. ಈ ಚಿಕಿತ್ಸೆಗೆ ಆಸ್ಪತೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ ಮತ್ತು ಡಾ. ಜೋಸ್ಟಲ್ ಪಿಂಟೊ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಏ.26ರಂದು ಬಿಡುಗಡೆಗೊಂಡಿದ್ದಾರೆ.

ಫಾದರ್ ಮಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ರಿಚರ್ಡ್ ಕೊಯೆಲ್ಲೊ ಅವರು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article