
ಮಾಡದ ಸಮಗ್ರ ಕಾಮಗಾರಿ: ಉಳ್ಳಾಲ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ
ಉಳ್ಳಾಲ: ಉಳ್ಳಾಲ ಉರೂಸ್ ಕಾರ್ಯಕ್ರಮಗೆ 1.5 ಕೋಟಿ ಬಿಡುಗಡೆ ಆಗಿದ್ದರೂ ಕೂಡ ಸಮಗ್ರ ಕಾಮಗಾರಿ ಮಾಡುವಲ್ಲಿ ನಗರ ಸಭೆ ವಿಫಲವಾಗಿದೆ ಎಂದು ಆರೋಪಿಸಿ ಸದಸ್ಯ ಜಬ್ಬಾರ್ ಅವರು ಅಧ್ಯಕ್ಷರನ್ನು ತರಾಟೆ ಗೈದ ಘಟನೆ ನಗರ ಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಜಬ್ಬಾರ್ ಅವರು ಮಾಸ್ತಿಕಟ್ಟೆ, ಹೊಸಪಳ್ಳಿ ರಸ್ತೆ, ಬಿಲಾಲ್ ಹೋಟೆಲ್ ಬಳಿ, ಚರಂಡಿ, ಇಂಟರ್ ಲಾಕ್ ಕಾಮಗಾರಿ ಸಮಗ್ರ ವಾಗಿ ನಿರ್ವಹಿಸಿಲ್ಲ. ಮಾಸ್ತಿಕಟ್ಟೆ ವಿದ್ಯುತ್ ಕಂಬದಲ್ಲಿ ಅಳವಡಿಸಿದ ಸ್ವಿಚ್ ಬೋರ್ಡ್ ಅಪಾಯದಲ್ಲಿ ಇದೆ. ಉರೂಸ್ ಬಂತು ಎಂದು ಕಾಟಾಚಾರಕ್ಕೆ ಕಾಮಗಾರಿ ಯಾಕೆ ಮಾಡಬೇಕು ಎಂದು ಪ್ರಶ್ನಿಸಿ ತೂರಾಟಗೈದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮತಡಿ ಅವರು ಉರೂಸ್ ಪ್ರಯುಕ್ತ ಬಂದ ಅನುದಾನದಲ್ಲಿ ಕಾಮಗಾರಿ ಮಾಡಲಾಗಿದೆ. ಕಾಮಗಾರಿ ಎಲ್ಲಿ ಬಾಕಿ ಇದೆ ಎಂದು ಇಂಜಿನಿಯರ್‌ಗೆ ತೋರಿಸಿ. ಅವರು ವರದಿ ನೀಡಿದಲ್ಲಿ ಉಳಿದ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.
ಸಭಾತ್ಯಾಗ:
ಇದೇ ಸಂದರ್ಭದಲ್ಲಿ ಕೌನ್ಸಿಲರ್ ದಿನಕರ್ ಉಳ್ಳಾಲ ಗಂಡಿ ವಾರ್ಡ್‌ನ ಕಾಮಗಾರಿ, ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಎರಡು ತಿಂಗಳ ಹಿಂದೆ ನಿರ್ಣಯ ಆಗಿತ್ತು. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಇದರಲ್ಲಿ ರಾಜಕೀಯ ಇದೆ.ಈ ಬಗೆ ನ್ಯಾಯ ಪಡೆಯಲು ನಾನು ಕೋರ್ಟಿಗೆ ಹೋಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಮಾಸ್ತಿ ಕಟ್ಟೆ ಬಳಿ ಹೊಸದಾಗಿ ನಿರ್ಮಾಣ ಗೊಂಡ ತಂಗುದಾಣಕ್ಕೆ ದರ್ಗಾ ಮಾಜಿ ಅಧ್ಯಕ್ಷ ಇಬ್ರಾಹಿಂ ಹಾಜಿ ಅವರ ಹೆಸರು ಇಡಬೇಕು ಎಂದು ಎಸ್‌ಡಿಪಿಐ ಸದಸ್ಯರು ಆಗ್ರಹಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಇತರ ಸದಸ್ಯರು ದಿ.ಇಬ್ರಾಹಿಂ ಹಾಜಿ ಉತ್ತಮ ಸಾಧನೆ ಮಾಡಿದವರು. ಅವರ ಹೆಸರು ಇಡಬೇಕು ಎಂದು ಒತ್ತಾಯಿಸಿದರು.
ಈ ವಿಚಾರದಲ್ಲಿ ಅಯ್ಯೂಬ್ ಮಂಚಿಲ ಮಾತನಾಡಿ, ಶಾಸಕರು ಆಯಾ ಕ್ಷೇತ್ರದ ಸುಪ್ರೀಂ. ಅವರ ಹೆಸರು ಅಳಿಸಲು ಆಗುವುದಿಲ್ಲ ಎಂದಾಗ ಕೋಲಾಹಲ ಸೃಷ್ಟಿಯಾಯಿತು. ಇದೇ ವಿಚಾರದಲ್ಲಿ ಎಸ್‌ಡಿಪಿಐ ಸದಸ್ಯರು ಹಾಗೂ ಕೌನ್ಸಿಲರ್ ಅಯ್ಯೂಬ್ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ಮತಡಿ ಅವರು ಈ ವಿಚಾರದಲ್ಲಿ ಚರ್ಚೆ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.
ಎಸ್‌ಡಿಪಿಐ ಸದಸ್ಯ ಅಸ್ಗರ್ ತಂಗುದಾಣ ಕೈ ಸಂಬಂಧಿಸಿ ಅಧ್ಯಕ್ಷರಲ್ಲಿ ಕೇಳಿದ ಪ್ರಶ್ನೆಗೆ ಸದಸ್ಯ ಅಯ್ಯೂಬ್ ಮಂಚಿಲ ಉತ್ತರ ನೀಡಿದಾಗ ಆಕ್ರೋಶ ವ್ಯಕ್ತವಾಯಿತು. ಈ ವೇಳೆ ಅಸ್ಗರ್ ಅವರು ನಾನು ಪ್ರಶ್ನೆ ಕೇಳಿದ್ದು, ಅಧ್ಯಕ್ಷರೇ ಉತ್ತರ ಅವರೇ ನೀಡಲಿ. ನೀವು ಉತ್ತರ ನೀಡುವುದು ಯಾಕೆ ಎಂದು ಪ್ರಶ್ನಿಸಿ ಕೌನ್ಸಿಲರ್ ಅಯ್ಯೂಬ್ ಅವರನ್ನು ತರಾಟೆಗೈದರು. ಈ ವಿಚಾರದಲ್ಲಿ ಕೆಲ ಕಾಲ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಕೆಲವು ಸದಸ್ಯರು ಸಭೆಯಿಂದ ಹೊರ ನಡೆದರು.
ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.