
ತುಂಬೆ, ಜಕ್ರಿಬೆಟ್ಟು ಡ್ಯಾಂನಲ್ಲಿ ಹೆಚ್ಚುವರಿ ನೀರು ಹೊರಕ್ಕೆ
Sunday, May 25, 2025
ಬಂಟ್ವಾಳ: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುವ ಮಳೆಗೆ ಬಂಟ್ವಾಳ ತಾಲೂಕಿನ ವಿವಿದೆಡೆಯಲ್ಲಿ ಹಾನಿಗಳಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲು ಕೊಂಚ ಏರಿಕೆ ಕಂಡುಬಂದಿದೆ.
ತುಂಬೆ ಮತ್ತು ಜಕ್ರಿಬೆಟ್ಟು ವೆಂಟೆಡ್ ಡ್ಯಾಂಗಳಲ್ಲಿಯು ಗೇಟ್‌ಗಳನ್ನು ತೆರವುಗೊಳಿಸಿ ಹೆಚ್ಚುವರಿ ನೀರನ್ನು ಕೆಳಭಾಗಕ್ಕೆ ಬಿಡಲಾಗುತ್ತಿದೆ. ಬೆಳಗ್ಗಿನ ಹೊತ್ತು ನೇತ್ರಾವತಿ ನದಿಯಲ್ಲಿ 3.9 ಮಿ.ಮಿ.ನಷ್ಟು ಮಟ್ಟದಲ್ಲಿ ಹರಿಯುತ್ತಿದ್ದು, ಘಟ್ಟ ಪ್ರದೇಶಗಳಲ್ಲಿ ವಿಪರೀತವಾದ ಗಾಳಿ, ಮಳೆಯಾದರೆ ನೇತ್ರಾವತಿ ನದಿಯಲ್ಲು ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಕಳೆದೆರಡು ದಿನಗಳಿಂದ ಬಂಟ್ವಾಳ ಸಹಿತ ಜಿಲ್ಲೆಯಲ್ಲಿ ಗಾಳಿಯ ಜೊತೆಗೆ ಜಡಿಮಳೆ ಸುರಿಯುತ್ತಿದ್ದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ.
ತುಂಬೆ ಡ್ಯಾಂನಲ್ಲಿ ತುಂಬಿದ ನೀರು:
ತುಂಬೆ ಡ್ಯಾಮ್ ನಲ್ಲಿ ಭಾನುವಾರ 5.30 ಮೀ.ಗೆ ನೀರು ನಿಲುಗಡೆಗೊಳಿಸಿ ಹೆಚ್ಚುವರಿ ನೀರನ್ನು ಡ್ಯಾಂನ 6 ಗೇಟ್‌ಗಳನ್ನು ತೆರವುಗೊಳಿಸಿ ಕೆಳಭಾಗಕ್ಕೆ ಬಿಡಲಾಗುತ್ತಿದೆ. ಅದೇ ರೀತಿ ಜಕ್ರಿಬೆಟ್ಟು ಡ್ಯಾಂನಲ್ಲಿ ಕೂಡ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂನತ್ತ ಬಿಡಲಾಗುತ್ತಿದೆ. ಪರಿಣಾಮ ನದಿ ತೀರದ ತಗ್ಗುಪ್ರದೇಶದಲ್ಲಿ ನೀರು ನಿಲುಗಡೆಯಾಗಿದೆ.