
ಬಂಟ್ವಾಳದಲ್ಲಿ ಜಡಿಮಳೆ ಮುಂದುವರಿದ ಹಾನಿ: ಮನೆಗೆ ನುಗ್ಗಿದ ನೀರು
Sunday, May 25, 2025
ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುವ ಜಡಿಮಳೆ,ಗಾಳಿಗೆ ಬಂಟ್ವಾಳ ತಾಲೂಕಿನಲ್ಲಿ ಹಾನಿ ಮುಂದುವರಿದಿದೆ. ಶನಿವಾರ ಹಾಗೂ ಭಾನುವಾರದ ನಿರಂತರ ಮಳೆಗೆ ಹಲವೆಡೆಗಳಲ್ಲಿ ಹಾನಿಯಾದ ಬಗ್ಗೆ ವರದಿಯಾಗಿದೆ.
ಕಡೇಶ್ವಾಲ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದಿದ್ದರೆ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಭೆಯಲ್ಲಿ ಶಿಥಿಲಗೊಂಡ ಛಾವಣಿಗೆ ಟಾರ್ಪಲ್ ಅಳವಡಿಸಲು ಕ್ರಮವಹಿಸಲಾಗಿದೆ.
ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಅಬುಬಕ್ಕರ್ ಅವರ ಮನೆಯ ಗೋಡೆಗೆ ಜಾನಿಯಾಗಿದ್ದಲ್ಲದೆ ಹಂಚು ಹಾರಿದೆ. ಬಡಗಬೆಳ್ಳೂರು ಗ್ರಾಮದ ಮಮತಾ ಎಂಬವರ ಮನೆಯ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿಯಾಗಿದೆ.
ನೆಟ್ಲಮುಡ್ನೂರು ಪರ್ಲೋಟ್ಟು ಬಳಿ ಮರ ಬಿದ್ದು ಕಲುಸಂಕ ಮುರಿದಿದ್ದು, ಯಾವುದೇ ಹಾನಿಯಾಗಿರುವುದಿಲ್ಲ, ಬಿ.ಮೂಡ ಗ್ರಾಮದ ಗೂಡಿನ ಬಳಿ ಎಂಬಲ್ಲಿಯ
ಜಿ.ಎಂ. ಅಬ್ದುಲ್ ಲತೀಪ್ ಅವರ ಮನೆ ಸಮೀಪದ ತಡೆಗೋಡೆ ಬಿದ್ದಿದ್ದು, ಮನೆಗೆ ಯಾವುದೇ ಹಾನಿ ಇರುವುದಿಲ್ಲ,ಸಜೀಪ ಮುನ್ನೂರು ಗ್ರಾಮದ ಮುಬಾರಕ್ ಎಂಬವರ ಮನೆಗೆ ಸ್ಥಳೀಯ ಚರಂಡಿಯ ನೀರು ನುಗ್ಗಿದ್ದು, ಈ ಮನೆಮಂದಿಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.