
ಕೀರ್ತನೆಗಳ ಮೂಲಕ ಮನಸ್ಸನ್ನು ದೇವರಲ್ಲಿ ಸ್ಥಿರಗೊಳಿಸಲು ಸಾಧ್ಯ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಕುಂದಾಪುರ: ದಾಸರ ಕೀರ್ತನೆಗಳು ಅನುಭವದ ಆಧಾರದ ಮೇಲೆ ರಚಿತವಾದವುಗಳು. ಇವು ನಮ್ಮ ಜೀವನಕ್ಕೆ ಹತ್ತಿರವಾಗಿವೆ. ಆದ್ದರಿಂದ ಈ ಕೀರ್ತನೆಗಳ ಮೂಲಕ ಮನಸ್ಸನ್ನು ದೇವರಲ್ಲಿ ಸ್ಥಿರಗೊಳಿಸಲು, ಆ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮಿಯವರು ಹೇಳಿದರು.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಕ್ಷೇತ್ರದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು ಭಜನೋತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಿಂದಿನ ಯುಗಗಳಲ್ಲಿ ಮನುಷ್ಯರಿಗೆ ಅಸ್ತಿಗತ ಪ್ರಾಣವಿದ್ದುದರಿಂದ ಆಯುಷ್ಯವೂ ದೀರ್ಘವಾಗಿತ್ತು. ಆಗ ಯಜ್ಞಯಾಗಗಳು, ತಪಸ್ಸನ್ನಾಚರಿಸುವುದು ಸಾಧ್ಯವಿತ್ತು. ಇಂದು ಕಲಿಯುಗದಲ್ಲಿ ನಮಗೆ ಅನ್ನಗತ ಪ್ರಾಣವಿರುವುದರಿಂದ ಆಯುಷ್ಯ ಕಡಿಮೆ. ಈ ಕಡಿಮೆ ಅವಧಿಯಲ್ಲೇ ಭಗವಂತನ ಒಲುಮೆ ಗಳಿಸಿ ನಮ್ಮ ಜನ್ಮಸಾರ್ಥಕಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗ ನಾಮ ಸಂಕೀರ್ತನೆ ಅಥವಾ ಭಜನೆ. ಈ ಮೂಲಕ ಸರ್ವರೂ ದೇವರ ಒಲುಮೆ ಪಡೆಯಲು ಸಾಧ್ಯ ಎಂದವರು ವಿವರಿಸಿದರು.
ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಸಿ ಹಾಗೂ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕುಂದಾಪುರ ತಾಲೂಕು ಹಾಗೂ ಶ್ರೀರಾಮ ಕೋಟೀಶ್ವರ ಕಲಾಸಂಘ, ಕೋಟೇಶ್ವರ ಹಾಗೂ ತಾಲೂಕು ಭಜನಾ ಮಂಡಳಿಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಹಾಗೂ ಭಜನೋತ್ಸವವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ನೇತಾರ ಮಲ್ಯಾಡಿ ಶಿವರಾಮ ಶೆಟ್ಟಿ, ಸಮಾಜ ಸೇವಕ ಕೊರ್ಗಿ ವಿಠಲ್ ಶೆಟ್ಟಿ, ಶ್ರೀ ಮಹಾಂಕಾಳಿ ದೇವಾಲಯ ಸಮಿತಿ ಅಧ್ಯಕ್ಷ ಜಯಾನಂದ ಖಾರ್ವಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕೋಟೇಶ್ವರದ ಶ್ರೀ ರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಸೀತಾರಾಮ ಧನ್ಯ, ಕುಂಭಾಶಿ ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ ಶುಭ ಹಾರೈಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಸಭಾಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆಗೂ ಮುನ್ನ ಶೋಭಯಾತ್ರೆ ನಡೆಸಲಾಯಿತು. ದೇವಳದ ಆಡಳಿತ ಸಮಿತಿಯ ಸದಸ್ಯರು, ವ್ಯವಸ್ಥಾಪಕ ನಟೇಶ್ ಕಾರಂತ, ವಿವಿಧೆಡೆಗಳಿಂದ ಆಗಮಿಸಿದ ಭಜನಾ ತಂಡಗಳವರು, ತರಬೇತುದಾರರು, ಹಿರಿ ಕಿರಿಯ ಕೀರ್ತನಕಾರರು ಉಪಸ್ಥಿತರಿದ್ದರು.
ಬಾಬಣ್ಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಪ್ರಭಾಕರ ವಂದಿಸಿದರು.