
ಮಂಗಳೂರು ವಿ.ವಿ.: 36.98 ಕೋಟಿ ರೂ.ಗಳ ಕೊರತೆ ಬಜೆಟ್
ಮಂಗಳೂರು: ಮಂಗಳೂರು ವಿವಿಯ 2025-26೨ನೇ ಸಾಲಿನ ಆಯವ್ಯಯ ಅಂದಾಜನ್ನು ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ಮಂಡಿಸಿದರು.
ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಗುರುವಾರ ನಡೆದ ಈ ಸಾಲಿನ ಶೈಕ್ಷಣಿಕ ಮಂಡಳಿಯ ಪ್ರಥಮ ವಿಶೇಷ ಸಭೆಯಲ್ಲಿ ಅಯವ್ಯಯ ಮಂಡಿಸಲಾಯಿತು.
ಈ ಅವಧಿಯಲ್ಲಿ ಒಟ್ಟು 163.29 ಕೋಟಿ ರೂ.ಗಳ ಆದಾಯ ಅಂದಾಜಿಸಲಾಗಿದ್ದು, 200.27 ಕೋಟಿ ರೂ.ಗಳ ಖರ್ಚು ನಿರೀಕ್ಷಿಸಲಾಗಿದೆ. ಸುಮಾರು 36.98 ಕೋಟಿ ರೂ. ಗಳ ಕೊರತೆ ಕಾಣಿಸಲಾಗಿದೆ. ಕಳೆದ ಸಾಲಿನಲ್ಲಿ 20.79 ಕೋಟಿ ರು.ಗಳ ಕೊರತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ 16.19 ಕೋಟಿ ರೂ.ಗಳ ಕೊರತೆ ಹೆಚ್ಚಾಗಿರುತ್ತದೆ. ಈ ಸಾಲಿನಲ್ಲಿ ಸರ್ಕಾರ ಯೋಜನೇತರ ಅನುದಾನವಾಗಿ 63.35 ಕೋಟಿ ರು. ಮಂಜೂರು ಮಾಡಿದೆ. ಆದರೆ ವಿವಿಯಲ್ಲಿ 438 ಮಂದಿ ಪಿಂಚಣಿದಾರರಿದ್ದು, 361 ಮಂದಿ ಪಿಂಚಣಿದಾರರು ಮತ್ತು 77 ಮಂದಿ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ವಾರ್ಷಿಕ 30 ಕೋಟಿ ರೂ. ಪಿಂಚಣಿ ಮೊತ್ತಕ್ಕೆ ವ್ಯಯಿಸಬೇಕಾಗುತ್ತದೆ. ಈ ಸಾಲಿನಲ್ಲಿ 22 ಮಂದಿ ವಯೋನಿವೃತ್ತಿ ಹೊಂದಲಿದ್ದು, ಅವರಿಗೆ 13.34 ಕೋಟಿ ರೂ. ಮೊತ್ತದ ಅಗತ್ಯವಿದೆ. ಈ ಸಾಲಿಗೆ ವಿಶ್ರಾಂತಿ ವೇತನದ ಅನುದಾನಕ್ಕಾಗಿ 48.58 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, 15 ಕೋಟಿ ರೂ. ಬಿಡುಗಡೆಗೊಂಡಿದೆ. ಬಾಕಿ ಮೊತ್ತವನ್ನು
ವಿವಿಯ ಆಂತರಿಕ ಸಂಪನ್ಮೂಲದಿಂದ ಹೊಂದಿಸಲು ಕಷ್ಟವಾಗುವುದರಿಂದ 33.58 ಕೋಟಿ ರೂ. ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದರು.