
ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ನೀರೂರಿಸುವ ಮಾವು..
ಮಂಗಳೂರು: ಬಾಯಲ್ಲಿ ನೀರೂರಿಸುವ ಬಗೆಬಗೆಯ ಮಾವಿನ ಹಣ್ಣುಗಳು... ಕಂಪು ಸೂಸುವ ಹಣ್ಣುಗಳ ರಾಜ... ರಾಸಾಯನಿಕ ಮುಕ್ತ ವಿವಿಧ ತಳಿಗಳ ಮಾವು... ವಿವಿಧ ಗಾತ್ರದ ನೈಸರ್ಗಿಕವಾಗಿ ಮಾಗಿದ ಫಲಗಳು...
ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಈಗ ಮಾವಿನ ಘಮ. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ತೋಟಗಳಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ.
ನ್ಯೂಜಿಲ್ಯಾಂಡ್ ಮೂಲದ ‘ಮಾಯ’, ಥಾಯ್‌ಲ್ಯಾಂಡ್ ಮೂಲದ ‘ಬ್ರೂನಿ ಕಿಂಗ್’, ಆಸ್ಟ್ರೇಲಿಯಾ ಮೂಲದ ‘ಲಿಲಿ’ ಮಾವುಗಳ ಜತೆಗೆ ಬಾದಾಮಿ, ಅಲಾನ್ಸೋ, ಬಂಗನಪಲ್ಲಿ, ಇಮಾಮ್
ಪಸಂದ್, ತೋತಾಪುರಿ, ರುಮಾನಿ, ಮುಂಡಪ್ಪ, ರಸಪೂರಿ, ಮಲ್ಗೋವಾ, ಹಾಮ್ಲೆಟ್, ಸಿಂಧೂರ, ಹನಿ ಡ್ಯೂ, ಕೇಸರ್, ಕಲಪಾಡಿ, ಕೊಂಕಣ್ ರುಚಿ, ಮಲ್ಲಿಕಾ, ಮೀಟಾ ಗೋಲಾ, ಸಾಸಿವೆ (ಸಕ್ಕರೆ ಗುಟ್ಲೆ- ಶುಗರ್ ಬೇಬಿ) ಹೀಗೆ ವೈವಿಧ್ಯಮಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ.
37 ತಳಿಯ ಮಾವಿನ ಹಣ್ಣುಗಳು ವಿವಿಧ ಗಾತ್ರ, ಬಣ್ಣಗಳಲ್ಲಿ ಲಭ್ಯವಿದೆ. ಮಾವಿನ ಹಣ್ಣಿನ ಜತೆಗೆ ರಾಮನಗರದ ಗಮ್ಲೆಸ್ ಹಾಗೂ ಸ್ಥಳೀಯ ತಳಿಯ ಹಲಸಿನ ಹಣ್ಣು ಮಾರಾಟಕ್ಕಿವೆ. ಮಾವು ಹಾಗೂ ಹಲಸು ಗಿಡಗಳನ್ನು ಮಾರಾಟಕ್ಕಿಡಲಾಗಿದೆ.
ಸಿಂದೂರ..
ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಶನ್ ಸಿಂದೂರ ಹಿನ್ನೆಲೆಯಲ್ಲಿ ಸಿಂದೂರ ತಳಿಯ ಮಾವಿನ ಹಣ್ಣಿಗೆ ವಿಶೇಷ ಬೇಡಿಕೆ ಕಂಡುಬಂತು. ಸಿಂಧೂರ ಮಾವು ಕೆಜಿಗೆ 80 ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ.