
SSLC ಫಲಿತಾಂಶ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ-ವಿದ್ಯಾರ್ಥಿಗಳು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಸ್ಪೀಕರ್
Friday, May 2, 2025
ಮಂಗಳೂರು: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಹಾರೈಸಿದ್ದಾರೆ.
ಅಲ್ಲದೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಇದಕ್ಕಾಗಿ ಶ್ರಮಿಸಿದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕ-ಶಿಕ್ಷಕಿಯರಿಗೆ, ಪೋಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.
ಬಹಳ ವಿಶೇಷವಾಗಿ ಅವರ ಮಂಗಳೂರು ಕ್ಷೇತ್ರ ವ್ಯಾಪ್ತಿಯ ನರಿಂಗಾನ ಗ್ರಾಮದ ಪುಂಡಕೈ ನಿವಾಸಿ ಸರಸ್ವತಿ ಹಾಗೂ ಚಂದ್ರಶೇಖರ್ ದಂಪತಿಗಳ ಪುತ್ರಿ ಅಪೇಕ್ಷಾ ರಾಜ್ಯದಲ್ಲಿಯೇ ಹತ್ತನೇ ರ‍್ಯಾಂಕ್ ಗಳಿಸಿದ್ದಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತಾ, ಅಪೇಕ್ಷಾರ ಭವಿಷ್ಯ ಉಜ್ವಲವಾಗಲಿ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹಾರೈಸಿದ್ದಾರೆ.
ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ಆತಂಕ, ಹತಾಶೆಗೆ ಒಳಗಾಗುವುದು ಬೇಡ, ನಿಮ್ಮೆದುರು ಮತ್ತೆ ಪರೀಕ್ಷೆ ಬರೆಯುವ ಅವಕಾಶಗಳಿವೆ. ಮರಳಿ ಪ್ರಯತ್ನಿಸಿದರೆ ಯಶಸ್ಸು ಖಂಡಿತಾ ಸಿಗಲಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.