
ಮುಖ್ಯಮಂತ್ರಿಯಿಂದ ಹಕ್ಕು ಪತ್ರ ವಿತರಣೆ: ಮಮತಾ ಗಟ್ಟಿ
Thursday, May 15, 2025
ಮಂಗಳೂರು: ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗಿದ್ದು, ಇದೀಗ ಭೂಮಿಯ ಹಕ್ಕನ್ನು ಒದಗಿಸುವ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯ ಮೇ 16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸಲಿದ್ದಾರೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರು ತಿಂಗಳ ವಿಶೇಷ ಅಭಿಯಾನದ ಮೂಲಕ ಸರ್ವೆ ನಡೆಸಿ ಹಕ್ಕುಪತ್ರ ಒದಗಿಸುವ ಕಾರ್ಯ ನಡೆದಿದೆ. ‘ನನ್ನ ಭೂಮಿ’ ಹೆಸರಿನಲ್ಲಿ ಇದೀಗ ಫಲಾನುಭವಿಗಳು ಹಕ್ಕುಪತ್ರ ಪಡೆಯಲಿದ್ದಾರೆ ಎಂದವರು ಹೇಳಿದರು.
ಇದೇ ವೇಳೆ ಪಡೀಲ್ನಲ್ಲಿ ತುಳುನಾಡ ಸಂಪ್ರದಾಯವನ್ನು ಬಿಂಬಿಸುವ, ಒಂದೇ ಸೂರಿನಡಿ ಹಲವು ಇಲಾಖೆಗಳ ಸೇವೆಯನ್ನು ಒದಗಿಸುವ ಜಿಲ್ಲಾಧಿಕಾರಿ ನೂತನ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ. ಹಿಂದೆ ಉಸ್ತುವಾರಿ ಹಾಗೂ ಅರಣ್ಯ ಸಚಿವರಾಗಿದ್ದ ರಮಾನಾಥ ರೈಯವರ ಮುತುವರ್ಜಿಯಲ್ಲಿ ಹಿಂದಿನ ಅವಧಿ ಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಶಂಕುಸ್ಥಾಪನೆಗೊಂಡ ಪ್ರಜಾ ಸೌಧ ಸಂಕೀರ್ಣವನ್ನು ಇದೀಗ ಅವರೇ ಉದ್ಘಾಟಿಸುತ್ತಿರುವುದು ಸಂತಸದ ವಿಚಾರ ಎಂದವರು ಹೇಳಿದರು.
ಮುಖಂಡರಾದ ಟಿ.ಕೆ. ಸುಧೀರ್, ಭರತೇಶ್ ಅಮೀನ್, ಚಂದ್ರಕಲಾ ರಾವ್, ಶುಭೋದಯ ಆಳ್ವ, ಶಾಂತಲಾ ಗಟ್ಟಿ, ಸ್ವರೂಪ, ನಝೀರ್ ಬಜಾಲ್ ಉಪಸ್ಥಿತರಿದ್ದರು.