
ಪ್ರಧಾನಿಗೆ ಅವಹೇಳನ ‘ಪುಡಾ’ ಅಧ್ಯಕ್ಷ ವಿರುದ್ಧ ದೂರು
ಪುತ್ತೂರು: ದೇಶದ ಪ್ರಧಾನ ಮಂತ್ರಿಗಳ ವಿರುದ್ಧ ಫೇಸ್ಬುಕ್ ಪೇಜ್ನಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಬಿಜೆಪಿಯಿಂದ ನಗರ ಠಾಣೆಯ ಪೊಲೀಸರಿಗೆ ಬುಧವಾರ ದೂರು ನೀಡಲಾಗಿದೆ. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ದೂರು ನೀಡಿದ್ದಾರೆ.
ಅಮಳ ರಾಮಚಂದ್ರ ಅವರು ಮೇ.12ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಬರಹವನ್ನು ಬರೆದಿರುತ್ತಾರೆ. ಪ್ರಧಾನಿಯನ್ನು ಅಣಕಿಸುವ ಅನೇಕ ಪೋಸ್ಟರ್ಗಳನ್ನು ಅವರು ಫೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿರುವುದು ದೇಶದ ಉನ್ನತ ಹುದ್ದೆಯಲ್ಲಿರುವ ಅವರಿಗೆ ಮಾಡಿದ ಅವಮಾನವಾಗಿದೆ. ದೇಶದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ಬಗ್ಗೆ ಕೀಳು ಭಾವನೆಯನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ದೇಶದ ಭದ್ರತೆಯ ಬಗ್ಗೆ ಕೀಳು ಭಾವನೆಯನ್ನು ಬಿಂಬಿಸುವುದು ದೇಶ ದ್ರೋಹದ ಕೆಲಸವಾಗಿದೆ. ಇದು ಬಿಜೆಪಿ ಕಾರ್ಯಕರ್ತರಾದ ನಮಗೆ ಬೇಸರ ಆಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿಗೆ ಅವಮಾನ ಮಾಡಿದ ಅಮಳ ರಾಮಚಂದ್ರ ಅವರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.