
ಸುಳ್ಯ ಭಾರೀ ಮಳೆ: ಮರ ಬಿದ್ದು ಮನೆಗೆ ಹಾನಿ
Sunday, May 25, 2025
ಸುಳ್ಯ: ಸುಳ್ಯದಲ್ಲಿ ಭಾನುವಾರ ದಿನ ಪೂರ್ತಿ ಭಾರೀ ಮಳೆ ಸುರಿಯಿತು. ಬೆಳಿಗ್ಗಿನಿಂದ ಆರಂಭಗೊಂಡ ಕುಂಭದ್ರೋಣ ಮಳೆ ದಿನ ಪೂರ್ತಿ ಮುಂದುವರಿಯಿತು. ಎಡೆ ಬಿಡದೆ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು.
ಮನೆಯಿಂದ ಹೊರ ಬರಲಾಗದ ರೀತಿಯಲ್ಲಿ ನಿರಂತರ ಮಳೆಯಾಯಿತು.
ಭಾರಿ ಗಾಳಿ ಮಳೆಗೆ ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯರಸ್ತೆಯ ಬದಿಯಲ್ಲಿ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಒಂದೇ ಕಟ್ಟಡದಲ್ಲಿರುವ ಮೂರು ಮನೆಗಳ ಮೇಲೆ ಮರ ಬಿದ್ದು ಅದರ ಮೇಲ್ಛಾವಣಿ ಸಂಪೂರ್ಣ ನಾಶವಾಗಿದೆ. ಮೇಲ್ಛಾವಣಿ ಶೀಟ್‌ಗಳು ಮನೆಯೊಳಗೆ ಬಿದ್ದು ಮಕ್ಕಳು ಸೇರಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಶೀಟ್ ಮುರಿದ್ದು ಬಿದ್ದು ಮನೆಯೊಳಗೆ ಇರುವ ವಸ್ತುಗಳು ಮಳೆಗೆ ನಾಶವಾಗಿದೆ. ಮನೆಯೊಳಗೆ ಇರುವ ಬೆಡ್, ಎಲ್ಲಾ ಉಪಕರಣಗಳು ಸಂಪೂರ್ಣ ನಾಶವಾಗಿದ್ದು ಅಪಾರ ನಷ್ಟ ಉಂಟಾಗಿದೆ. ಕಲ್ಲುಗುಂಡಿಯಲ್ಲಿಯೂ ಕೆಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿ ಸಂಭವಿಸಿದ್ದು ಗ್ರಾಮದಲ್ಲಿ ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.