
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ಈಗ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಮೂಡಿ ಬಂದಿದೆ: ಹೆಗ್ಗಡೆ
ಉಜಿರೆ: ನಮ್ಮ ದೇಶದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ವಿಧಾನವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ಈಗ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಮೂಡಿ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲೆ ಪ್ರಥಮವಾಗಿ ಉಜಿರೆಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಪದವಿ ಕಾಲೇಜನ್ನು ಹಾಗೂ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು ಈಗ ಜನರಿಗೆ ಔಷಧಿ ರಹಿತ ಚಿಕಿತ್ಸಾ ಪದ್ಧತಿ ಬಗ್ಗೆ ವಿಶ್ವಾಸ ಮೂಡಿಬಂದಿದೆ. ಇಲ್ಲಿ ಕಲಿತ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಇಂದು ವಿಶ್ವದೆಲ್ಲೆಡೆ ಸಂಸ್ಥೆಯ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿಸದ್ದು ಜನರ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಧರ್ಮಸ್ಥಳದ ಆಶ್ರಯದಲ್ಲಿ ಶಾಂತಿವನ, ಮಣಿಪಾಲದ ಬಳಿಕ ಪರೀಕಾದಲ್ಲಿ ಕ್ಷೇಮವನ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಸೌಖ್ಯವನ ಎಂಬ ಮೂರು ಪ್ರಕೃತಿಚಿಕಿತ್ಸಾ ಆಸ್ಪತ್ರೆಗಳನ್ನು ನಡೆಸುತ್ತಿದ್ದು ಎಲ್ಲವೂ ‘ಸಾಧಕ’ರಿಂದ ಭರ್ತಿಯಾಗಿವೆ. ‘ದೇಹಕ್ಕೆ ರೋಗ ನಿರೋಧಕ ಶಕ್ತಿ ಇದೆ, ಮರಳಿ ಪ್ರಕೃತಿಗೆ’ ಎಂಬ ತತ್ವದಡಿ ಮೂರು ಆಸ್ಪತ್ರೆಗಳಲ್ಲಿ ಔಷಧಿ ರಹಿತ ಶುಶ್ರೂಷೆ ಮೂಲಕ ಜನರು ಪೂರ್ಣ ಆರೋಗ್ಯಭಾಗ್ಯವನ್ನು ಹೊಂದುತ್ತಿದ್ದಾರೆ ಎಂದು ಹೆಗ್ಗಡೆಯವರು ಸಂತಸ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಬೆಂಗಳೂರಿನ ಎಸ್ ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಮಾತನಾಡಿ, ಮಾಹಿತಿಯ ಕೊರತೆ, ಆಧುನಿಕ ಜೀವನಶೈಲಿ ಹಾಗೂ ಆಹಾರ-ವಿಹಾರದ ವಿಧಾನದಿಂದ ಇಂದು ಜನರು ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಏಡ್ಸ್ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ. ಅಲೋಪತಿ, ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ಧತಿ ಹಾಗೂ ಆಧುನಿಕ ಸಂಶೋಧನೆಗಳ ಫಲಿತಾಂಶವನ್ನು ಅಳವಡಿಸಿ ರೋಗ ಗುಣಪಡಿಸಲು ಸಮಗ್ರತೆಯ ಚಿಕಿತ್ಸಾ ಪದ್ಧತಿ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ದೇಹದ ರೋಗ ನಿರೋಧಕಶಕ್ತಿ ವೃದ್ಧಿಸಿಕೊಂಡು ಆರೋಗ್ಯಭಾಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಎಲ್ಲಡೆ ಜನಪ್ರಿಯವಾಗುತ್ತಿದೆ. ಆಯುಷ್ ಇಲಾಖೆ ಮೂಲಕ ಇದಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಆಯುಷ್ ಇಲಾಖೆ ಆಶ್ರಯದಲ್ಲಿ ದಕ್ಷಿಣಕನ್ನಡದಲ್ಲಿಯೂ ಒಂದು ಸಾಂಪ್ರದಾಯಿಕ ಕೇಂದ್ರ ತೆರೆಯುವ ಉದ್ದೇಶವಿದೆ. ಈ ಬಗ್ಗೆ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರವನ್ನು ಅವರು ಕೋರಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಎಸ್ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಅವರಿಗೆ ‘ಜೀವಮಾನದ ವಿಶೇಷ ಸಾಧಕ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಡಾ. ನವೀನ್ ಕೆ.ವಿ., ಡಾ. ಬಾಬು ಜೋಸೆಫ್, ಡಾ. ಮಂಜುನಾಥ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದು, ಶುಭಾಶಂಸನೆ ಮಾಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿ, ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ವಂದಿಸಿದರು. ಡಾ. ಬಿಂದು, ಡಾ. ದೀಪಿಕಾ, ಅನನ್ಯಾ ಮತ್ತು ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.