
ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ನೇಣಿಗೆ ಶರಣು
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಸಮೀಪದ ಕೀಳ್ತೋಡಿಯಲ್ಲಿ ತುಂಬು ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ಪತಿ ಬಳಿಕ ತಾನು ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ.
ಮೂಲತ: ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ (52) ಆತ್ಮಹತ್ಯೆಗೆ ಶರಣಾದರೆ, ಇವರ ಪತ್ನಿ ಜಯಂತಿ (45)ಕೊಲೆಗೀಡಾದವರಾಗಿದ್ದಾರೆ.
ಗುರುವಾರ ಬೆಳಗ್ಗೆ ತಿಮ್ಮಪ್ಪ ಮೂಲ್ಯ ಅವರು ಅಡುಗೆಕೋಣೆಯ ಪಕ್ಕಾಸಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಇವರ ಪತ್ನಿ ಜಯಂತಿ ಅವರ ಮೃತದೇಹ ಮಲಗುವ ಕೋಣೆಯ ಬೆಡ್ಡಿನ ಕೆಳಗೆ ಪತ್ತೆಯಾಗಿದೆ.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನ ಜಾವದ ಮಧ್ಯೆ ಈ ಘಟನೆ ನಡೆದಿರುವ ಗುಮಾನಿಯಿದ್ದು,ಬೆಳಗ್ಗೆ ಪ್ರತಿನಿತ್ಯ ಜಯಂತಿಯವರನ್ನು ಮಾತನಾಡಿಸುವ ನೆರೆಮನೆಯ ಮಹಿಳೆಯೋರ್ವರು ಇವರ ಮನೆ ಬಾಗಿಲು ತೆರೆಯದಿದ್ದರಿಂದ ಮನೆಯ ಬಾಗಿಲು ತಟ್ಟಿ ಮುಂದಕ್ಕೆ ತೆರಳಿದ್ದರು.ಅವರು ವಾಪಾಸ್ ಬಂದಾಗಲು ಮನೆ ಬಾಗಿಲು ತೆರೆಯದಿದ್ದು,ಅನುಮಾನಗೊಂಡು ತನ್ನ ಮನೆಗೆ ಬಂದು ತಿಳಿಸಿದ್ದರು.ಹಾಗೆ ಮನೆಯ ಹಿರಿಯರೋರ್ವರು ತೆರಳಿ ತಿಮ್ಮಪ್ಪ ಅವರ ಮನೆ ಬಾಗಿಲು ಬಡಿದರೂ ತೆರೆಯದಿದ್ದಾಗ ಬಾಗಿಲನ್ನು ತಳ್ಳಿ ಮನೆಯೊಳಗೆ ಪ್ರವೇಶಿಸಿದಾಗ ಈ ಘಟನೆ ಬಯಲಿಗೆ ಬಂದಿದೆ.
ತಕ್ಷಣ ಅವರು ಬೊಬ್ಬೆ ಹಾಕಿದ್ದು ನೆರೆಯವರು ಹಾಗೂ ಅಲ್ಲಿಯೇ ವಾಸ್ತವ್ಯವಿರುವ ಜಯಂತಿ ಅವರ ಸಂಬಂಧಿಕರು ಅಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಿಮ್ಮಪ್ಪ ಮೂಲ್ಯ ಅವರು ಮೂಲತ:
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿಯಾಗಿದ್ದು, ವೃತ್ತಿಯಲ್ಲಿ ಟೈಲರ್ ಆಗಿದ್ದರು.ಇದೀಗ ಟೈಲರ್ ವೃತ್ತಿತೊರೆದು ಮಿತ್ತಮಜಲಿನಲ್ಲಿರುವ ತನ್ನ ಅಣ್ಣನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದುಪ್ರತಿದಿನ ಬೆಳಿಗ್ಗೆ ಹೋಗಿ ರಾತ್ರಿ ಹೊತ್ತು ಬಡಗುಂಡಿಗೆ ಬರುತ್ತಿದ್ದರು .
ಕಳೆದು 7 ವರ್ಷಗಳಿಂದ ಇವರು ಬಡಗುಂಡಿಯಲ್ಲಿರುವ ಪತ್ನಿ ಮನೆಯಲ್ಲೇ ವಾಸವಿದ್ದಾರೆ.ಈ ಮನೆಯಲ್ಲಿ ಇವರಿಬ್ಬರೇ ಇರುವುದಾಗಿದೆ.
16 ವರ್ಷದ ಹಿಂದೆ ವಿವಾಹವಾಗಿತ್ತು:
ಸ್ಥಳೀಯರ ಮಾಹಿತಿ ಪ್ರಕಾರ ಪತಿ-ಪತ್ನಿ ಅನ್ಯೋನ್ಯತೆಯಿಂದಲೇ ಇದ್ದರು.ಇವರಿಗೆ ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿಲ್ಲ. ಪ್ರಸ್ತುತ ಪತ್ನಿ ಜಯಂತಿ ಗರ್ಭಿಣಿಯಾಗಿದ್ದು, ಜು.2 ರಂದು ಸೀಮಂತಕ್ಕು ದಿನ ನಿಗದಿಯಾಗಿತ್ತು. ಸುಧೀರ್ಘ ವರ್ಷದ ಬಳಿಕ ಜಯಂತಿ ಬಸುರಿಯಾಗಿರುವುದರಿಂದ ಇವರಿಬ್ಬರು ಸಂತಸದಲ್ಲಿದ್ದರು.
ಸ್ವಭಾವದಲ್ಲಿ ಕೊಂಚ ಮುಂಗೋಪಿಯಾಗಿರುವ ತಿಮ್ಮಪ್ಪಅವರು ಬುಧವಾರ ಅಣ್ಣನ ಅಂಗಡಿಗೆ ಕೆಲಸಕ್ಕೆ ಹೋಗಿರಲಿಲ್ಲ,ಪತ್ನಿಯ ಸೀಮಂತದ ಸಿದ್ದತೆಯಲ್ಲಿದ್ದು,ಕತ್ತಲೆಯವರೆಗೂ ಮನೆಯಲ್ಲಿದ್ದ ಇವರಿಬ್ಬರನ್ನು ಸ್ಥಳೀಯರು ಮಾತನಾಡಿಸಿದ್ದಾರೆ. ಜಯಂತಿ ಅವರು ಮಧ್ಯಾಹ್ನ ಸ್ಥಳೀಯ ಸ್ವ-ಸಹಾಯ ಸಂಘದಿಂದ ಐವತ್ತು ಸಾ.ರೂ.ಸಾಲವನ್ನು ಪಡೆದಿದ್ದು,ರಾತ್ರಿ ಪದಾರ್ಥಕ್ಕಾಗಿ ಕೋಳಿ ಮಾಂಸವನ್ನು ಕೂಡ ತಂದಿದ್ದರೆನ್ನಲಾಗಿದೆ.ಜಯಂತಿ ಅವರು ಗುರುವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಬೇಕಾಗಿತ್ತು ಸ್ಥಳೀಯರು ತಿಳಿಸಿದ್ದಾರೆ.
ರಾತ್ರಿ ಪತಿ-ಪತ್ನಿಯ ಮಧ್ಯೆ ಯಾವುದೋ ಕ್ಷುಲ್ಲಕ ವಿಚಾರದಲ್ಲಿ ಜಗಳವಾಗಿರುವ ಶಂಕೆ ವ್ಯಕ್ತವಾಗಿದ್ದು,ಇವರೊಳಗಿನ ಜಗಳ ತಾರಕಕ್ಕೇರಿದೆ. ಆಗ ಕುಪಿತನಾದ ತಿಮ್ಮಪ್ಪ ಪತ್ನಿಗೆ ಹಲ್ಲೆಗೈದು ಕುತ್ತಿಗೆ ಹಿಸುಕಿದಲ್ಲದೆ ತಲೆದಿಂಬು ಇರಿಸಿ ಉಸಿರುಗಟ್ಟಿಸಿ ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ. ತಲೆದಿಂಬಿನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಕುತ್ತಿಗೆಯಲ್ಲು ಹಿಸುಕಿರುವ ಬೆರಳಚ್ಚು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬಳಿಕ ಈ ಘಟನೆಯಿಂದ ನೊಂದು ತಾನು ಕೂಡ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾನೆ.
ಜಯಂತಿ ಅವರ ತಂಗಿ ಸುಜಾತ ಫರಂಗಿಪೇಟೆ ಹಾಗೂ ಮೃತ ತಿಮ್ಮಪ್ಪ ಅವರ ಅಣ್ಣ ವಿಶ್ವನಾಥ ಸಜೀಪ ಮೂಡ ಅವರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿ,ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಪ್ಲೊರೆನ್ಸಿಕ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಲಾಗಿದೆ.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್, ಬಂಟ್ಚಾಳ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.