ಗ್ರಾ.ಪಂ. ಮಟ್ಟದಿಂದಲೇ ಸರಕಾರಕ್ಕೆ ಬಿಸಿ: ಶಾಸಕ ರಾಜೇಶ್ ನಾಯ್ಕ್

ಗ್ರಾ.ಪಂ. ಮಟ್ಟದಿಂದಲೇ ಸರಕಾರಕ್ಕೆ ಬಿಸಿ: ಶಾಸಕ ರಾಜೇಶ್ ನಾಯ್ಕ್


ಬಂಟ್ವಾಳ: ಕರ್ನಾಟಕ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಜೂ.23 ರಂದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರತಿ ಗ್ರಾ.ಪಂ. ಮುಂಭಾಗ ನಡೆಸಲಾಗುವ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ಸವಲತ್ತು ವಂಚಿತ ಫಲಾನುಭವಿಗಳು ಕೂಡ ಭಾಗವಹಿಸುವ ಮೂಲಕ ಗ್ರಾ.ಪಂ. ಮಟ್ಟದಿಂದಲೇ ಜಡ್ಡು ಹಿಡಿದ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಆಗಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.

ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಬಿಜೆಪಿ ಬಂಟ್ವಾಳ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರದಷ್ಟು ಮಂದಿ ಫಲಾನಿಭವಿಗಳು ರಾಜ್ಯಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಪಕ್ಷ ಅವರ ಜೊತೆ ನಿಲ್ಲಬೇಕಾಗಿದೆ.ಪಕ್ಷದ ಸೂಚನೆಯನ್ವಯ ತಾನು ಕೂಡ ಕ್ಷೇತ್ರದ ರಾಯಿ ಗ್ರಾ.ಪಂ.ಕಚೇರಿ ಮುಂದೆ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದೇನೆ ಎಂದ ಅವರು ಕಾಂಗ್ರೆಸ್ 

ಗ್ಯಾರಂಟಿ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಹಾಕಿ ಲೂಟಿ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ನಯಾಪೈಸೆಯ ಅನುದಾನ ಸಿಗುತ್ತಿಲ್ಲ, ಇದೀಗ ಬಡವರಿಗೆ ಅನುಕೂಲವಾಗುತ್ತಿದ್ದ ಪಿಂಚಣಿ, ಮಾಶಾಸನ, ಸಂಧ್ಯಾಸುರಕ್ಷಾ ಸಹಿತ ವಿವಿಧ ಯೋಜನೆಗಳ ಸವಲತ್ತನ್ನು ಸ್ಥಗಿತಗೊಳಿಸಲು ಮುಂದಾಗಿರುವ ಸಿದ್ದರಾಮಯ್ಯ ಸರಕಾರದ ವಿರುದ್ಧದ ಈ ಹೋರಾಟದಲ್ಲಿ ಸವಲತ್ತು ವಂಚಿತ ಫಲಾನುಭವಿಗಳನ್ನು ಕೂಡ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವಕ್ಕೆ ಇಡೀ ಜಗತ್ತಿನಲ್ಲೇ ಭಾರತಕ್ಕೆ ವಿಶೇಷವಾದ ಸ್ಥಾನಮಾನ ದೊರಕುತ್ತಿದೆ. 2047ಕ್ಕೆ ಪೂರ್ಣಪ್ತಮಾಣದಲ್ಲಿ ವಿಕಸಿತ ಭಾರತವಾಗಿ ಅಭಿವೃದ್ಧಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರ ನಿರ್ದೇಶನದಂತೆ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಮಿತಿ ಪದಾಧಿಕಾರಿಗಳು ಹಿರಿಯರ ಮತ್ತು ಕಿರಿಯರ ಸಲಹೆ,ಸೂಚನೆಯನ್ನು ಅಲಿಸುವಂತ ವ್ಯವಧಾನವನ್ನು ಬೆಳೆಸಿಕೊಳ್ಳಬೇಕು, ಪಂಚಾಯತ್ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಪಕ್ಷದ ಜೊತೆಗೆ ತಮ್ಮ ವ್ಯಕಿತ್ವ ವಿಕಸನವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಂಟ್ವಾಳ ತಾ.ನಲ್ಲಿ 7,543 ಮಂದಿಗೆ ನೋಟೀಸ್ ಜಾರಿ:

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಇದೀಗ ಸಂಧ್ಯಾ ಸುರಕ್ಷಾ, ಪಿಂಚಣಿ, ಮಾಶಸನ ಸೇರಿದಂತೆ ವಿವಿಧ ಯೋಜನೆಯಡಿ ಸೌಲಭ್ಯವನ್ನು ಕಿತ್ತುಕೊಳ್ಳಲು ಮುಂದಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ 7543 ಮಂದಿ ಫಲಾನುಭವಿಗಳಿಗೆ ನೋಟಿಸ್ ಜಾರಿಗೊಳಿಸಿ ಬಡವರ ಹೊಟ್ಟಗೆ ಬರೆ ಹಾಕಿದೆ ಎಂದು ಅವರು ಟೀಕಾ ಪ್ರಹಾರಗೈದರು.

ಜನನ, ಮರಣದಿಂದ ಹಿಡಿದು ಎಲ್ಲದಕ್ಕು ತೆರಿಗೆ ಹೆಚ್ಚಿಸಲಾಗಿದ್ದು, ದ.ಕ.ಜಿಲ್ಲೆ ಸರಕಾರಕ್ಕೆ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದರೂ ಅಭಿವೃದ್ದಿಕಾರ್ಯಕ್ಕೆ ಮಾತ್ರ ಚಿಕ್ಕಾಸು ಅನುದಾನ ನೀಡುತ್ತಿಲ್ಲ, ಕೇವಲ ಕೇಂದ್ರಸರಕಾರದ ಮೇಲೆ ಗೂಬೆ ಕೂರಿಸುವ ಕಾರ್ಯದಲ್ಲಿ ತೊಡಗಿದೆ. ಜಿಲ್ಲೆಯಲ್ಲಿ 9/11 ಸಮಸ್ಯೆ ಪೆಡಂಭೂತವಾಗಿ ಬೆಳೆದಿದೆ. ಮೂಡ, ಬೂಡಾಗಳಲ್ಲಿ ಸಾವಿರಾರು ಅರ್ಜಿಗಳು ಕೊಳೆಯುತ್ತಿದೆ.ಜನರ ಸಮಸ್ಯೆಗಳಿಗೆ ಸ್ಪಂದಿಸದ ಕರ್ನಾಟಕ ಸರಕಾರ ಕೇವಲ ವಸೂಲಿಬಾಜಿಯಲ್ಲಿ ನಿರತವಾಗಿದೆ.ಈ ನಿಟ್ಟಿನಲ್ಲಿ ವಿಪಕ್ಷವಾಗಿ ಬಿಜೆಪಿ ಅವಿಭಜಿತ ದ.ಕ.ಜಿಲ್ಲೆಯ ಎಲ್ಲಾ ಗ್ರಾ.ಪಂ.ನ ಎದುರು ಸರಕಾರದ ವಿರುದ್ಧ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.

ನರೇಂದ್ರಮೋದಿಯವರ 11 ವರ್ಷಗಳ ಆಡಳಿತದಲ್ಲಿ  ಪ್ರತಿಯೊಂದು ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಗತ್ತಿನಲ್ಲೇ ಅಗ್ರಗಣ್ಯ ಸ್ಥಾನದತ್ತ ದಾಪುಗಾಲಿಡುತ್ತಿದ್ದು,ವಿಕಸಿತ ಭಾರತ ಸಂಕಲ್ಪ ಸಭೆಯ ಮೂಲಕ ಪ್ರಧಾನಿ ಮೋದಿ ಆಡಳಿತದಲ್ಲಾದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಮಹತ್ವದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.

ವಿಧಾನಪರಿಷತ್ ಸದಸ್ಯರಾದ ಪ್ರತಾಪ ಸಂಹ ನಾಯಕ್ ಬೆಳ್ತಂಗಡಿ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ  ಪ್ರ.ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್, ಉಪಾಧ್ಯಕ್ಷೆ ಪೂಜಾ ಪೈ, ರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ವಿಕಸಿತ ಭಾರತ ಸಂಕಲ್ಪ ಸಂಚಾಲಕ ಹರೀಶ್ ಕಂಜಿಪಿಲಿ, ವಿವಿಧ ಘಟಕದ ಪದಾಧಿಕಾರಿಗಳಾದ ರಾಕೇಶ್ ರೈ ಕಡೆಂಜ, ರೂಪಾ, ಮೋಹನ್ ಪಿ.ಎಸ್., ವಿಜಯರೈ, ವಸಂತ ಅಣ್ಣಳಿಕೆ, ಬಾಲಕೃಷ್ಣ ಸೇರ್ಕಳ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.

ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಇನ್ನೋರ್ವ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು. ನಾಗೇಶ್ ಮಧ್ವ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article