
ಜೂ.21 ರಂದು ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ‘ಯೋಗ ವಿತ್ ಯೋಧ’ ಕಾರ್ಯಕ್ರಮ
ಮಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಸೋಮೇಶ್ವರ ಕಡಲ ತೀರದಲ್ಲಿ ಜೂ.21 ರಂದು ‘ಯೋಗ ವಿತ್ ಯೋಧ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಸೋಮೇಶ್ವರ ಬೀಚ್‌ನ ಕಡಲ ಕಿನಾರೆಯಲ್ಲಿ ಜೂ.21ರಂದು 3 ಗಂಟೆಗೆ ನಡೆಯಲಿರುವ ‘ಯೋಗ ವಿತ್ ಯೋಧ’ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಸ್ತಾವನೆ ಮಾಡಿದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂ.21 ಅನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು. ಅದರಂತೆ ಈ ಬಾರಿಯ ಆಚರಿಸಲಾಗುತ್ತಿರುವ 11ನೇ ವಿಶ್ವ ಯೋಗ ದಿನದ ಥೀಮ್ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಆಗಿದ್ದು, ನಮ್ಮ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಅಭ್ಯಾಸ. ಅದರಂತೆ ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ‘ಯೋಗ ವಿತ್ ಯೋಧ’ ಕಾರ್ಯಕ್ರಮವನ್ನು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಸಾಹಸ ಜಲಕ್ರೀಡೆಗಳ ತಾಣವಾಗಿರುವ ಸಸಿಹಿತ್ಲುವಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಕಡಲ ಕಿನಾರೆಯಲ್ಲಿ ಯೋಗಾಭ್ಯಾಸ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಕ್ಯಾ. ಚೌಟ ಅವರು ತಿಳಿಸಿದ್ದಾರೆ.
ಸೋಮೇಶ್ವರ ಬೀಚ್ ತನ್ನ ರುದ್ರ ಗಾಂಭೀರ್ಯದಿಂದ ಎಲ್ಲರ ಮನ ಸೆಳೆಯುತ್ತಿದೆ. ಈ ಮನಮೋಹಕ ಪ್ರವಾಸಿ ಹಾಗೂ ಧಾರ್ಮಿಕ ತಾಣವು ಜಾಗತಿಕವಾಗಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವಂತಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ, ನಮ್ಮ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ ಇದಾಗಿದೆ. ನಮ್ಮ ಕರಾವಳಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇಲ್ಲಿದೆ ಭೇಟಿ ನೀಡಿ, ಈ ತಾಣದ ಸೌಂದರ್ಯವನ್ನು ಅನಾವರಣಗೊಳಿಸುವ ಉತ್ತಮ ಗುಣಮಟ್ಟದ ಕಟೆಂಟ್ ಸೃಷ್ಟಿಸಿ, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಈ ಸ್ಥಳಕ್ಕೆ ಭೇಟಿ ನೀಡಲು ಪ್ರೇರೇಪಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಇನ್ನು ‘ಯೋಗ ವಿತ್ ಯೋಧ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧಕರು, ಕ್ರೀಡಾ ಸಿಬ್ಬಂದಿ, ಮಾಜಿ ಸೈನಿಕರು, ಜೀವರಕ್ಷಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು ಎಂದು ಕ್ಯಾ. ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.