
ವಾಹನ ತಪಾಸಣೆ: 1.58 ಲಕ್ಷ ದಂಡ
Thursday, June 19, 2025
ಉಡುಪಿ: ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ರಿರುವ ಬಗ್ಗೆ ತಿಳಿದುಬಂದಿದ್ದು, ಮಕ್ಕಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಗುರುವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ ವರೆಗೆ ವಿಶೇಷ ತಪಾಸಣೆ ಅಭಿಯಾನ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪಿಯಲ್ಲಿ ನಡೆಸಿ, ಶಾಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು.
ಈ ವಿಶೇಷ ತಪಾಸಣೆ ಅಭಿಯಾನದಲ್ಲಿ ಸುಮಾರು 930 ವಾಹನಗಳನ್ನು ತಪಾಸಣೆ ನಡೆಸಿ 282 ಪ್ರಕರಣ ದಾಖಲಿಸಿ 1.58 ಲಕ್ಷ ರೂ. ದಂಡ ವಿಧಿಸಲಾಗಿದೆ. ಅದರಲ್ಲಿ ಪಾನಮತ್ತ ಚಾಲನೆ ಬಗ್ಗೆ 1, ಸರಿಯಾದ ದಾಖಲೆ ಹೊಂದದಿರುವ 39, ಮಿತಿಗಿಂತ ಅಧಿಕ ಪ್ರಯಾಣಿಕರನ್ನು ಹೊಂದಿದ್ದ 84 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ವಿಶೇಷ ತಪಾಸಣೆ ಅಭಿಯಾನದಲ್ಲಿ 5 ಪೊಲೀಸ್ ನಿರೀಕ್ಷಕರು, 30 ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹನದ ಮಿತಿಗನುಗುಣವಾಗಿ ಮಕ್ಕಳ ಸಂಖ್ಯೆ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಒಂದು ವಾರದೊಳಗೆ ಅಳವಡಿಸಿಕೊಳ್ಳುವಂತೆ ಸೂಚಿಸಲಾಯಿತು. ತಪ್ಪಿದಲ್ಲಿ ಸಂಬಂಧಿತ ಶಾಲಾ ವಾಹನಗಳನ್ನು ಜಫ್ತಿ ಮಾಡಲಾಗುವುದು ಎಂಬ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.