
ಪಕ್ಷದ ಹಿತದೃಷ್ಠಿಯಿಂದ ಇಬ್ಬರಿಗೆ ನೋಟೀಸ್ ಜಾರಿಗೊಳಿಸಿದ್ದು ಸರಿಯಲ್ಲ: ಬಿ. ರಮಾನಾಥ ರೈ
ಬಂಟ್ವಾಳ: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಇಬ್ಬರಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿರುವುದು ಸರಿಯಲ್ಲ, ಪಕ್ಷದ ಹಿತದೃಷ್ಠಿಯಿಂದ ನಾಯಕರು ತಕ್ಷಣ ಅವರನ್ನು ಕರೆಸಿ ಮಾತುಕತೆ ನಡೆಸುವ ಮೂಲಕ ಸರಿಪಡಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದ್ದಾರೆ.
ಸೋಮವಾರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಹೀಂ ಹತ್ಯೆಯ ಹಿನ್ನಲೆಯಲ್ಲಿ ಒಂದು ಸಮುದಾಯದ ಕಾರ್ಯಕರ್ತರು, ಮುಖಂಡರು ಸಭೆ ಸೇರಿ ತಮ್ಮ ನೋವನ್ನು ವ್ಯಕ್ತಪಡಿಸಿ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆಯೇ ಹೊರತು ಪಕ್ಷಕ್ಕೆ ಯಾವುದೇ ರೀತಿಯಾಗಿ ವಿರೋಧ ವ್ಯಕ್ತಪಡಿಸಿಲ್ಲ, ಅಷ್ಟು ಜನರ ಪೈಕಿ ಕೇವಲ ಇಬ್ಬರು ಮುಖಂಡರಿಗೆ ಮಾತ್ರ ನೋಟೀಸ್ ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಳತ್ತಮಜಲು ನಿವಾಸಿ ಅಮಾಯಕ ರಹೀಂ ಕೊಲೆ ಮತ್ತು ಶಾಫಿ ಅವರ ಮೇಲಿನ ಮಾರಣಾಂತಿಕ ಹಲ್ಲೆ ಅತ್ಯಂತ ನೋವಿನ ಸಂಗತಿಯಾಗಿದೆಯಲ್ಲದೆ ಸಮಾಜದಲ್ಲಿ ಭಯವನ್ನುಂಟುಮಾಡಿದೆ ಕೊಲೆಯಾದ ರಹೀಂ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ಒಡನಾಡಿಯಾಗಿದ್ದರು. ಯಾರೊಂದಿಗೂ ದ್ವೇಷ ಭಾವನೆಯನ್ನು ಹೊಂದಿರಲಿಲ್ಲ ಎಂದು ಅವರ ಅನೇಕ ಗೆಳೆಯರು ಹೇಳಿಕೊಳ್ಳುತ್ತಿದ್ದಾರೆ. ಅವರ ಒಳ್ಳೆ ಪರಿಚಯಸ್ಥರು, ಸ್ನೇಹಿತರೇ ಈ ಕೃತ್ಯ ನಡೆಸಿರುವುದನ್ನು ಮೇಲ್ನೊಟಕ್ಕೆ ಗಮನಿಸಿದಾಗ, ಭವಿಷತ್ತಿನ ದಿನಗಳಲ್ಲಿ ಪ್ರತಿಯೋರ್ವರು ಕೂಡ ಜಾಗೃತೆ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಘಟನೆಯ ಹಿಂದೆ ದೊಡ್ಡ ಪಿತೂರಿಯೇ ಇರುವ ಅನುಮಾನವಿದೆ. ಇದರ ಹಿಂದಿರುವ ಸೂತ್ರಧಾರರು, ಪ್ರಚೋದನಕಾರಿ ಭಾಷಣ ಮಾಡುವವರ ಮತ್ತು ಘಟನೆಗೆ ತುಪ್ಪ ಸುರಿಯುವವರ ಮೇಲು ಪೊಲೀಸ್ ಇಲಾಖೆ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದ ಒತ್ತಾಯಿಸಿದ ರೈ ಅವರು ಜಿಲ್ಲೆಯಲ್ಲಿ ಮತ್ತೆ ಈ ರೀತಿಯಾದ ಕೃತ್ಯಗಳ ನಡೆಯದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಈಗಾಗಲೇ ಮುಂದಾಗಿದೆ. ಅದರ ಭಾಗವಾಗಿ ಪೊಲೀಸ್ ಅಧಿಕಾರಿಗಳಿಬ್ಬರನ್ನು ಬದಲಾಯಿಸಲಾಗಿದೆ ಎಂದರು.
ಪೊಲೀಸ್ ಅಧಿಕಾರಿಗಳು ಇಂತಹ ಘಟನೆಗಳಾದಾಗ ತಪ್ಪತಸ್ಥರ ವಿರುದ್ಧ ಒತ್ತಡ, ಅಮೀಷಗಳಿಗೆ ಒಳಗಾಗದೆ ಯಾವುದಕ್ಕು ರಾಜೀ ಮಾಡಿಕೊಳ್ಳದೆ ನಿರ್ದಾಕ್ಷ್ಯಣವಾದ ಕ್ರಮ ತೆಗೆದುಕೊಳ್ಳಬೇಕಲ್ಲದೆ ಇಚ್ಚಾಶಕ್ತಿಯಿಂದ ಕಾರ್ಯನಿರ್ವಹಿಸಿದಾಗ ಇಂತಹ ಘಟನೆ ಹತ್ತಿಕ್ಕಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಈ ನಿಟ್ಟಿನಲ್ಲಿ ಈಗಿನ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದರು.
ಡೆಂಗ್ಯೂ: ಕ್ರಮಕ್ಕೆ ಆಗ್ರಹ:
ಬಂಟ್ವಾಳ ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಇದನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆರೋಗ್ಯಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಪಕ್ಷದ ಪ್ರಮುಖರಾದ ಪಿಯೂಸ್ ರೋಡ್ರಿಗಸ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬೇಬಿ ಕುಂದರ್, ಪದ್ಮನಾಭ ರೈ, ಅಬ್ಬಾಸ್ ಆಲಿ, ಜಯಂತಿ ಪೂಜಾರಿ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ವಾಸು ಪೂಜಾರಿ ಲೊರೆಟ್ಟೊ, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ ಬಂಟ್ವಾಳ, ದೇವಪ್ಪ ಕುಲಾಲ್, ಸುದರ್ಶನ್ ಜೈನ್ ಮತ್ತಿತರರು ಇದ್ದರು.