
ಹಿಂದೂ ನಾಯಕರನ್ನು ದಮನಿಸಲು ಕಾಂಗ್ರೆಸ್ ಸರ್ಕಾರ ಷಡ್ಯಂತ್ರ: ನಳಿನ್‌ಕುಮಾರ್ ಕಟೀಲ್
ಮಂಗಳೂರು: ಮತಾಂಧರರಿಂದ ಹತ್ಯೆಯಾದ ಹಿಂದೂ ನಾಯಕ ಸುಹಾಸ್ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದ ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ ಭಟ್ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಹಿಂದೂಗಳ ಧ್ವನಿ ಅಡಗಿಸಲು ಷಡ್ಯಂತ್ರ ನಡೆಸಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯವನ್ನು ಓಲೈಸಲು ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಅರುಣ್ ಪುತ್ತಿಲ ಅವರಿಗೆ ವಿನಾಃ ಕಾರಣ ಗಡಿಪಾರು ನೊಟೀಸ್ ನೀಡಲಾಗಿದೆ. ಕಡಬದಲ್ಲಿ ಅಮಾಯಕ ಹಿಂದೂ ಹುಡುಗರ ಮನೆಗೆ ರಾತ್ರಿ ವೇಳೆ ಪೊಲೀಸರು ನುಗ್ಗಿ ಬೆದರಿಸುವ ತಂತ್ರ ನಡೆಸಿದ್ದಾರೆ. ಹಿಂದೂ ನಾಯಕರ ಮೇಲೆ ನಿರಂತರ ಸುಳ್ಳು ಕೇಸು ದಾಖಲಿಸುವ ಪ್ರಯತ್ನ ನಡೆದಿದೆ. ಶ್ರದ್ಧಾಂಜಲಿ ಸಭೆಯಲ್ಲಿ ಹಿಂದೂ ಸಮಾಜದ ಆತಂಕವನ್ನು ವ್ಯಕ್ತಪಡಿಸಿದ ನಾಯಕರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ತೀರಾ ಅತಿರೇಕದ ಕ್ರಮವಾಗಿದೆ. ಇದನ್ನು ಹಿಂದೂ ಸಮಾಜ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರವೀಣ್ ನೆಟ್ಟಾರ್ ಅವರ ಹತ್ಯೆಯಲ್ಲಿ ಕೇರಳ ಮೂಲದ ಆತಂಕವಾದಿ ಶಕ್ತಿಗಳ ಪಾತ್ರ ಇರುವುದು ಸ್ಪಷ್ಟವಾಗಿತ್ತು. ಇದೇ ಮಾದರಿಯಲ್ಲಿ ಸುಹಾಸ್ ಶೆಟ್ಟಿ ಅವರ ಹತ್ಯೆಯಾಗಿದೆ. ಇಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ನಿರ್ಮೂಲನೆಗೊಳಿಸುವ ಬದಲು ಕಾಂಗ್ರೆಸ್ ಸರ್ಕಾರ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಮಾಯಕ ಹಿಂದೂಗಳನ್ನು ದಮನಿಸುವ ನೀಚ ಕೃತ್ಯಕ್ಕೆ ಇಳಿದಿದೆ ಎಂದು ನಳಿನ್‌ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.