
ಸವಾರರಿಬ್ಬರ ಸಹಿತ ನದಿಯಲ್ಲಿ ಕೊಚ್ಚಿ ಹೋದ ಸ್ಕೂಟರ್: ಅದೃಷ್ಟವತ್ ಬದುಕುಳಿದ ಸವಾರರು
Monday, June 16, 2025
ಬೆಳ್ತಂಗಡಿ: ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಯುವಕರಿಬ್ಬರು ದ್ವಿಚಕ್ರ ವಾಹನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಅದೃಷ್ಟವತ್ ಯಾವುದೇ ಅಪಾಯವಿಲ್ಲದೆ ಬದುಕುಳಿದ ಘಟನೆ ನಡೆದಿದೆ.
ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಹಿತ್ತಿಲಪೇಲ ಕೂಡುಜಾಲು ಎಂಬಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಹಿತ್ತಿಲಪೇಲದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಪುತ್ರ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಭಾನುವಾರ ಕೆಲಸಕ್ಕೆ ಹೋಗುವ ಸಂದರ್ಭ ಕೂಡುಜಾಲುವಿನಲ್ಲಿರುವ ನದಿಯನ್ನು ಸ್ಕೂಟರ್ ಸಮೇತ ದಾಟಲು ಮುಂದಾಗಿದ್ದಾರೆ. ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದ ಈ ವೇಳೆ ನೀರಿನ ರಭಸಕ್ಕೆ ಸ್ಕೂಟರ್ ಸಹಿತ ಸವಾರರಿಬ್ಬರು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವತ್ ಸ್ಕೂಟರ್ ನದಿ ಬದಿಯ ಕಲ್ಲುಬಂಡೆಗೆ ತಾಗಿ ಸಿಲುಕಿಕೊಂಡಿದೆ. ಬಳಿಕ ಯುವಕರಿಬ್ಬರು ನದಿಯಲ್ಲಿ ಕೈಗೆ ಸಿಕ್ಕ ಯಾವುದೋ ಬಳ್ಳಿಯ ಸಹಾಯದಿಂದ ಮೇಲೆ ಬಂದಿದ್ದಾರೆ.