
ಕೊಲ್ಲೂರು ಮುಕಾಂಬಿಕೆಗೆ ರತ್ನಾಖಚಿತ ಮುಖವಾಡ ಸಮರ್ಪಣೆ
ಕುಂದಾಪುರ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ 1 ಕೆ.ಜಿ. ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಲಾಯಿತು.
ಕೊಲ್ಲೂರು ಮೂಕಾಂಬಿಕಾ ದೇವಿಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಆಯುರ್ವೇದ ವೈದ್ಯರಾಗಿರುವ ಡಾ. ಕೆ. ಲಕ್ಷ್ಮೀನಾರಾಯಣ ಅವರು 1 ಕೆ.ಜಿ. ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಿದ್ದಾರೆ. ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಿರುವ ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರಿಗೆ ದೇವಾಲಯದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ದೇವಿಗೆ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಡಾ. ಕೆ. ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರು ಪೂಜೆಯ ಬಳಿಕ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಿನ್ನದ ಮುಖವಾಡವನ್ನು ಸುಂದರವಾಗಿ ರಚನೆ ಮಾಡಲಾಗಿದ್ದು ನೋಡುಗರ ಮನ ಸೆಳೆಯುತ್ತದೆ. ದೇವಿಯ ಮುಖವಂತೂ ಪ್ರಶಾಂತ ಕಳೆಯಿಂದ ಕೂಡಿದೆ. ಕಣ್ಣುಗಳು, ಮೂಗು, ಹಣೆಯಲ್ಲಿ ಬೊಟ್ಟು, ಮೂಗುತಿ, ಕಿವಿಯೋಲೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಇದರ ಜೊತೆಗೆ ದೇವಿಗೆ ಇರುವ ಕಿರೀಟವಂತೂ ಮಹಾ ಅದ್ಭುತ. ಹಸಿರು, ಬಿಳಿ ಹಾಗೂ ಗುಲಾಬಿ ಹರಳುಗಳಿಂದ ಕಿರೀಟ ಸುಂದರವಾಗಿದೆ. ಕಿರೀಟವು ಅರ್ಧಚಂದ್ರನ ಒಳಗೊಂಡಿದೆ.
ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ ಅವರು ಸೇವಾಕರ್ತರನ್ನು ಅಭಿನಂದಿಸಿದರು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.