
ಕಾಲು ಜಾರಿ ನೀರಿಗೆ ಬಿದ್ದು ಯುವತಿ ಸಾವು
ಕುಂದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದ ಯುವತಿ ಮರಳಿ ಮನೆಗೆ ಬರುವಾಗ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.
ಜಡ್ಡಿನಗದ್ದೆಯ ಜಂಬೆಹಾಡಿ ಸಂಜೀವ ನಾಯ್ಕ ಮತ್ತು ನರ್ಸಿ ದಂಪತಿಯ 8 ಮಂದಿ ಮಕ್ಕಳಲ್ಲಿ ಕೊನೆಯವರಾದ ಮೂಕಾಂಬಿಕಾ (23) ಮೃತ ದುರ್ದೈವಿ.
ಮೂಕಾಂಬಿಕಾ ಅವರು ಅಮಾಸೆಬೈಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾಳಿ ಮಧ್ಯಾಹ್ನದ ಬಳಿಕ ಇದ್ದುದರಿಂದ ಬೆಳಗ್ಗೆ ಹುಲ್ಲು ತರಲು ಅತ್ತಿಗೆ ಅಶ್ವಿನಿ ಅವರೊಂದಿಗೆ ತೋಟಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ ಅಶ್ವಿನಿ ಅವರು ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಹೊರಟಿದ್ದು, ಮೂಕಾಂಬಿಕಾ ಅವರನ್ನು ಹಿಂಬಾಲಿಸುತ್ತಿದ್ದರು. ಮನೆ ತಲುಪಿದ ಅಶ್ವಿನಿ ಅವರು ಹಿಂದಿರುಗಿ ನೋಡಿದಾಗ ಮೂಕಾಂಬಿಕಾ ಜೊತೆಗೆ ಇರಲಿಲ್ಲ. ಅವರನ್ನು ಕರೆಯುತ್ತ ಪುನಃ ತೋಟದ ಕಡೆಗೆ ತೆರಳಿದರು. ಮನೆಗೆ ಬರುವ ಇನ್ನೊಂದು ಮಾರ್ಗವಾದ ಜಂಬೆಹಾಡಿ ಮಾರ್ಗವಾಗಿ ಮೂಕಾಂಬಿಕಾ ಅವರನ್ನು ಹುಡುಕುತ್ತ ಬಂದಾಗ ಅಣೆಕಟ್ಟಿನ ದಂಡೆಯ ಮೇಲೆ ಹುಲ್ಲು ಕೊಯ್ಯುವ ಕತ್ತಿ ಕಾಣಿಸಿತು. ಭಯದಿಂದ ಅಶ್ವಿನಿ ಅವರು ಬೊಬ್ಬೆ ಹಾಕಿದಾಗ ಮನೆಯವರು ಓಡಿ ಬಂದು ಅಣೆಕಟ್ಟಿನಲ್ಲಿ ಹುಡುಕಿದ್ದು ಮೃತದೇಹ ಪತ್ತೆಯಾಯಿತು.
ಮರಳಿ ಬರುವಾಗ ಅಶ್ವಿನಿ ಅವರು ಅಣೆಕಟ್ಟಿನ ಕೆಳಭಾಗದಲ್ಲಿ ಹೊಳೆಗೆ ಇಳಿದು ದಾಟಿಕೊಂಡು ಬಂದಿದ್ದರು. ಆದರೆ ಮೂಕಾಂಬಿಕಾ ಅವರು ಅಲ್ಲಿ ಅತ್ತಿಗೆಯನ್ನು ಹಿಂಬಾಲಿಸದೆ ಅಣೆಕಟ್ಟಿನ ದಂಡೆಯ ಮೇಲಿನಿಂದ ಬಂದ ಕಾರಣ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಕಾಂಬಿಕಾ ಅವರು ತಂದೆ, ತಾಯಿ, 6 ಮಂದಿ ಸಹೋದರಿಯರು ಮತ್ತು ಸಹೋದರನನ್ನು ಅಗಲಿದ್ದಾರೆ.